ಬೆಂಗಳೂರು: ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಆಚರಿಸಬಾರದು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆಡಳಿತ ಮುಸ್ಲಿಮರ ಪರವಾಗಿದ್ದು ಹಿಂದೂಗಳ ವಿರುದ್ಧವಾಗಿತ್ತು.
ಇಸ್ಲಾಮಿನ ಉಗ್ರಾಭಿಮಾನಿಯಾಗಿದ್ದ ಟಿಪ್ಪುವಿನ ಪ್ರಾಂತಾಧಿಕಾರಿಗಳಲ್ಲಿ ಒಬ್ಬ ಹಿಂದೂ ಕೂಡ ಇರಲಿಲ್ಲ. ಆತ ರೂಪಿಸಿದ ಕಂದಾಯ ನಿಯಮಗಳಂತೆ ಮುಸ್ಲಿಮರು ತೆರಿಗೆ ಕೊಡಬೇಕಾಗಿರಲಿಲ್ಲ. ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರ ಕಂದಾಯ ರದ್ದುಪಡಿಸುತ್ತಿದ್ದ. ಅಲ್ಲದೆ ಪರಂಪರಾಗತ ಸ್ಥಳ ನಾಮಗಳನ್ನು ಉರ್ದುವಿಗೆ ಬದಲಾಯಿಸಿದ್ದ ಎಂದು ಆರೋಪಿಸಿದರು.
ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ, ಮತಾಂಧ, ಹಿಂದೂ ಧರ್ಮದ ದ್ವೇಷಿ ಎಂಬುದಕ್ಕೆ ನೂರಾರು ಆಧಾರಗಳಿವೆ. ಅವನ ಖಡ್ಗದ ಮೇಲಿನ ಶಾಸನದಲ್ಲಿ, “ತನ್ನ ಖಡ್ಗವು ಹಿಂದೂಗಳನ್ನು ಕೊಲ್ಲಲು ಘರ್ಜಿಸುತ್ತದೆ’ ಎಂದು ಟಿಪ್ಪು ಹೇಳಿಕೊಂಡಿರುವುದು ಅವನೊಬ್ಬ ಮತಾಂಧನೆಂದು ಸಾಬೀತುಪಡಿಸುತ್ತದೆ.
ಶಾಸನವೊಂದರಲ್ಲಿ ಮುಸ್ಲಿಮರಲ್ಲದ ಎಲ್ಲ ಪುರುಷರನ್ನು ಕೊಂದು ಅವರ ಹೆಂಡಿತಿ ಮತ್ತು ಮಕ್ಕಳನ್ನು ಸೇವಕರನ್ನಾಗಿ ಮಾಡಿಕೊಂಡು ಅವರ ಆಸ್ತಿಯನ್ನು ಮುಸ್ಲಿಮರಿಗೆ ಹಂಚಬೇಕು ಎಂದು ತಿಳಿಸಿದ್ದಾನೆ. ಇದು ಆತ ಹಿಂದೂ ವಿರೋಧಿಯಾಗಿದ್ದ ಎಂಬುದಕ್ಕೆ ನಿದರ್ಶನವಾಗಿದೆ ಎಂದರು.
ಲಂಡನ್ ವಸ್ತು ಸಂಗ್ರಹಾಲಯದಲ್ಲಿ ದೊರೆತ ಪತ್ರಗಳನ್ನು ಗಮನಿಸಿದರೆ ಟಿಪ್ಪು ಸುಲ್ತಾನ್ ಹಿಂದೂಗಳನ್ನು ಎಷ್ಟು ಕ್ರೂರವಾಗಿ ಕಾಣುತ್ತಿದ್ದ ಎಂದು ತಿಳಿಯುತ್ತದೆ. 1788ರಲ್ಲಿ ಅಬ್ದುಲ್ ಖಾದರನಿಗೆ ಬರೆದ ಪತ್ರದಲ್ಲಿ 12 ಸಾವಿರ ಹಿಂದೂಗಳನ್ನು ಮತಾಂತರಿಸಲಾಗಿದೆ ಎಂದು ತಿಳಿಸಿದ್ದಾನೆ.
ಕಲ್ಲಿಕೋಟೆಯ ಸೇನಾಪತಿಗೆ ಬರೆದ ಪತ್ರದಲ್ಲಿ ನನ್ನ ಇಬ್ಬರು ಸಹಚರರು ಸೇರಿದಂತೆ ಮಿರ್ ಹುಸೇನ್ ಆಲಿಯನ್ನು ಕಳುಹಿಸಿದ್ದೇನೆ. ಅವರ ಜತೆ ಸೇರಿ ಎಲ್ಲ ಹಿಂದೂಗಳನ್ನು ಸೆರೆಹಿಡಿದು ಕೊಲ್ಲಬೇಕು ಎಂದು ತಿಳಿಸಿದ್ದಾನೆ. ಇಂಥವರ ಜಯಂತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿಲ್ಲ ಎಂದು ಹೇಳಿದರು.
ಇತ್ತೀಚಿಗೆ ವಿಚಾರವಾದಿಯೊಬ್ಬರು ಮಹಿಷಾಸುರ ರಾಕ್ಷಸನಲ್ಲವೆಂದೂ, ಅವನೊಬ್ಬ ಬೌದ್ಧಧರ್ಮದ ರಾಜ. ಅವನಿಂದಾಗಿ ಮೈಸೂರು ನಗರ ನಿರ್ಮಾಣವಾಯಿತೆಂದು ಪ್ರತಿಪಾದಿಸಿದ್ದಾರೆ. ಅಂತಹ ಬುದ್ಧಿಜೀವಿಗಳು ಟಿಪ್ಪು ಜಯಂತಿಯನ್ನು ಬೆಂಬಲಿಸುತ್ತಾರೆ. ಅವರು ಮುಂದೆ ಹಿಟ್ಲರ್ ಜಯಂತಿ ಆಚರಣೆಗೂ ಮುಂದಾದರೆ ಆಶ್ಚರ್ಯವಿಲ್ಲ ಎಂದು ತಿಳಿಸಿದರು.