ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದವರಿಗೆ ಮಾತ್ರ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ಎಂದು ಹೇಳುವ ಮೂಲಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ‘ಹಾಲಿ ಶಾಸಕ’ರಿಗೆ ಶಾಕ್ ನೀಡಿದ್ದಾರೆ. ನಗರದಲ್ಲಿ ಸೋಮವಾರ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯಕರ್ತರಿರಲಿ, ನಾಯಕರಿರಲಿ ಎಲ್ಲರಿಗೂ ಒಂದೇ ನಿಯಮ. ಕೊನೆ ಗಳಿಗೆಯಲ್ಲಿ ಹೆಲಿಕಾಪ್ಟರ್ ಹತ್ತಿ ದಿಲ್ಲಿಗೆ ಬಂದು ಟಿಕೆಟ್ ಪಡೆಯೋದಕ್ಕೆ ಈ ಬಾರಿ ಅವಕಾಶ ನೀಡಲ್ಲ ಎಂದು ಖಂಡತುಂಡವಾಗಿ ನುಡಿದರು.
2018ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗ ಬಯಸುವವರು ಕೆಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೇರೆ ಪಕ್ಷದಿಂದ ಬರುವವರಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಹೇಳಿದರು. ಕಾಂಗ್ರೆಸ್ ಒಂದು ಕುಟುಂಬವಿದ್ದಂತೆ. ಈ ಕುಟುಂಬದಲ್ಲಿ ಎಲ್ಲರಿಗೂ ಅಧಿಕಾರ, ಅವಕಾಶ ನೀಡಲು ಸಾಧ್ಯವಿಲ್ಲ. ಹಾಗಂತ ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಎಲ್ಲರಿಗೂ ಅವಕಾಶ ನೀಡಲಾಗದಿದ್ದರೂ, ಅಪ್ಪಿಕೊಳ್ಳಲು ಅವಕಾಶವಿದೆ. ಆ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ರೈತರು ಮತ್ತು ತಳ ವರ್ಗದ ಸಮುದಾಯದ ಪರವಾಗಿ ಉತ್ತಮ ಕೆಲಸ ಮಾಡುತ್ತಿದೆ. ಸರಕಾರ ಮಾಡಿದ ಕೆಲಸಗಳ ಬಗ್ಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಮೋದಿ ಸರಕಾರದ ಹಾಗೆ ಪ್ರಚಾರಕ್ಕಾಗಿ ಜನರ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಸಚಿವ ಸಂಪುಟ ಸದಸ್ಯರೂ ಸರಕಾರದ ಸಾಧನೆಗಳನ್ನು ಹೇಳಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು. ಮುಂದಿನ ಒಂದು ವರ್ಷದ ಅವಧಿಯಲ್ಲಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸುವಂತೆ ಸೂಚನೆ ನೀಡಿದರು.
ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬಿಜೆಪಿಯಲ್ಲಿ ಒಬ್ಬ ವ್ಯಕ್ತಿ ಮಾತ ನಾಡಿ, ಎಲ್ಲರೂ ಕೇಳಬೇಕು ಎನ್ನುವ ನಿಯಮ ಇದೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಮಾತನಾಡುವ ಅಧಿಕಾರ ಇದೆ. ಅಲ್ಲದೆ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಎಲ್ಲರ ಮೇಲೆ ಹೇರಲು ಬಯಸುತ್ತಾರೆ. ಆದರೆ, ಕಾಂಗ್ರೆಸ್ ಜನರ ಮನಸ್ಸಿನಲ್ಲೇನಿದೆ ಎನ್ನುವುದನ್ನು ಕೇಳಿ, ಅವರಿಷ್ಟದಂತೆ ಅಧಿ ಕಾರ ನಡೆಸುತ್ತದೆ ಎಂದು ವ್ಯಾಖ್ಯಾನಿಸಿದರು.
ಬಿಜೆಪಿ ದೇಶದಲ್ಲಿ ಸಮುದಾಯಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಅದೇ ಮಾರ್ಗ ಅನುಸರಿಸಿ ಗೆಲುವು ಪಡೆದಿದೆ. ಆದರೆ, ಕಾಂಗ್ರೆಸ್ ಎಲ್ಲ ಸಮುದಾಯಗಳ ಹಿತ ಕಾಪಾಡಲು ಶ್ರಮಿಸುತ್ತಿದೆ. ದೇಶದಲ್ಲಿ ರೈತರು, ದಲಿತರು, ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ, ಆದರೆ, ಅವರ ಗೋಳು ಕೇಳುವ ಸಂಯಮ ಕೇಂದ್ರ ಸರಕಾರಕ್ಕಿಲ್ಲ ಎಂದರು.
ರಾಹುಲ್‌ಗೆ ಬೆಳ್ಳಿ ಖಡ್ಗ
ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ಗೆ ಮೈಸೂರು ಪೇಟ, ಶಾಲು, ಬೆಳ್ಳಿ ಖಡ್ಗವನ್ನು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನೀಡಿದರು.