ಬೆಂಗಳೂರು: ಯಾವ ಸಮೀಕ್ಷೆಯೂ 100 ಪರ್ಸೆಂಟ್ ಸರಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 2011ರ ಸಮೀಕ್ಷೆಯ ಆಧಾರದ ಮೇಲೆ ಸಂಪನ್ಮೂಲಗಳು ಹಂಚಿಕೆ ನಡೆಯುತ್ತಿದೆ.
2015ರಲ್ಲಿ ಮತ್ತೆ ಜಾತಿಗಣತಿ ನಡೆದಿದೆ. ಆ ಜಾತಿಗಣತಿಗೆ ಬಹಳ ಒತ್ತನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಪ್ರತಿ ಮನೆ ಮನೆಗೂ ಹೋಗಿ ದೊಡ್ಡ ಪಟ್ಟಿ ಸಿದ್ದಪಡಿಸಿತ್ತು. ಯಾವ ಸಮೀಕ್ಷೆಯೂ ಕೂಡ 100ಕ್ಕೆ 100 ಸರಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದರು.
ಆದರೆ ಬಹಳ ಪ್ರಾಮಾಣಿಕವಾಗಿ ಗಣತಿ ಕೆಲಸವನ್ನು ಪೂರೈಸಲಾಗಿದೆ. ಅದನ್ನು ಯಾರು ಕೂಡ ಆ ಸಂದರ್ಭದಲ್ಲಿ ವಿರೋಧ ಮಾಡಿರಲಿಲ್ಲ. ಸಮೀಕ್ಷೆಯಿಂದ ಸಹಾಯಕವಾಗುತ್ತದೆ ಎನ್ನುವ ದೂರಾಲೋಚನೆಯಿಂದ ಜಾತಿ ಗಣತಿ ಮಾಡಿದ್ದೆವು. ವರದಿ ಬರುವ ಮೊದಲೇ ನಮ್ಮ ಸರ್ಕಾರದ ಅವಧಿ ಮುಗಿದಿತ್ತು. ನಂತರ ಬಿಜೆಪಿ ಸರ್ಕಾರ ಅದಕ್ಕೆ ಆಸಕ್ತಿ ತೋರಿತೋ ಇಲ್ಲವೋ ಗೊತ್ತಿಲ್ಲ ಎಂದರು.
ಒಟ್ಟು 180 ಕೋಟಿ ರೂಪಾಯಿ ಖರ್ಚು ಮಾಡಿ ವರದಿ ಸಿದ್ದಪಡಿಸಲಾಗಿದೆ. ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಅವರು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವವರು ಅವರಲ್ಲ. ಒಪ್ಪುವುದು ಬಿಡುವುದು, ಲೋಪ ದೋಷಗಳನ್ನು ತಿದ್ದುವುದು ನಂತರದ ಕೆಲಸ. ವರದಿಯನ್ನು ಕೂಲಂಕಶವಾಗಿ ನೋಡದೆ ಮಾತನಾಡುವುದು ಸರಿಯಲ್ಲ ಎಂದು ನುಡಿದರು.