Advertisement

ಶ್ರೀ ಕೃಷ್ಣ ನಗರಿಗೆ ಕತ್ತಲೆಯ ಕಾರಾಗೃಹ ಶಿಕ್ಷೆ! ಆರಿದ ಬೀದಿದೀಪ ಉರಿಯಲೇ ಇಲ್ಲ!

12:49 AM Mar 02, 2023 | Team Udayavani |

ಉಡುಪಿ: ಪ್ರಖ್ಯಾತ ಪ್ರವಾಸಿ ತಾಣ ಹಾಗೂ ಅಂತಾರಾಷ್ಟ್ರೀಯ ಪ್ರಸಿದ್ಧ ವಿದ್ಯಾ ಸಂಸ್ಥೆಗಳಿರುವಂಥ ಶ್ರೀ ಕೃಷ್ಣ ನಗರಿಯ ಪ್ರಮುಖರಸ್ತೆಗೆ ಸುಮಾರು ನಾಲ್ಕು ವರ್ಷಗಳಿಂದ ಕತ್ತಲೆಯ ಕಾರಾಗೃಹ ಶಿಕ್ಷೆ !

Advertisement

ಉಡುಪಿ-ಮಣಿಪಾಲ ಪ್ರಮುಖ ರಸ್ತೆ ಕತ್ತಲೆಯಲ್ಲೇ ಬದುಕು ನೂಕುತ್ತಿದೆ. ಸುಮಾರು ಮೂರು ವರ್ಷಗಳಿಂದ ಉಡುಪಿ ನಗರ ಬಸ್‌ ನಿಲ್ದಾಣದಿಂದ ಮಣಿಪಾಲದವರೆಗೆ ಬೀದಿ ದೀಪಗಳೇ ಇಲ್ಲ. ಹೆದ್ದಾರಿ ಅಗಲಗೊಳಿಸುವಿಕೆಗೆ ಹಳೆಯ ಬೀದಿ ದೀಪಗಳನ್ನು ತೆಗೆಯಲಾಯಿತೇ ಹೊರತು ಮತ್ತೆ ಹಾಕುವ ಗೋಜಿಗೆ ನಗರಸಭೆಯಾಗಲೀ, ಜನಪ್ರತಿನಿಧಿಗಳಾಗಲೀ ಹೋಗಲೇ ಇಲ್ಲ. ಹಾಗಾಗಿ ಇಂದಿಗೂ ಉಡುಪಿ ನಗರ ಕತ್ತಲೆಯಲ್ಲೇ ಮುಳುಗಿದೆ.

ವಾಹನಗಳ ಬೆಳಕೇ ಗತಿ
ರಾ.ಹೆ. ವ್ಯಾಪ್ತಿ ಮಲ್ಪೆ, ಕಲ್ಮಾಡಿ, ಆದಿಉಡುಪಿ, ಕರಾವಳಿ ಬೈಪಾಸ್‌, ಕುಂಜಿಬೆಟ್ಟು, ಲಕ್ಷ್ಮೀಂದ್ರ ನಗರ, ಮಣಿಪಾಲ ಮುಖ್ಯ ರಸ್ತೆಯಲ್ಲಿ ಸರಿಯಾದ ಬೀದಿದೀಪದ ವ್ಯವಸ್ಥೆ ಇಲ್ಲ. ಮಣಿಪಾಲದ ಅಂಚೆ ಕಚೇರಿ ಸಮೀಪದ ಬಸ್‌ ನಿಲ್ದಾಣ ಪರಿಸರವೂ ಕತ್ತಲೆ. ನಗರದ ಮುಖ್ಯ ರಸ್ತೆಯ ಆಸು ಪಾಸಿನಲ್ಲಿ ಹಲವು ವಿದ್ಯಾಸಂಸ್ಥೆಗಳು, ವಸತಿ ಪ್ರದೇಶಗಳಿವೆ. ಹತ್ತಕ್ಕೂ ಹೆಚ್ಚು ಬಸ್ಸು ನಿಲ್ದಾಣಗಳಿವೆ. ಇಲ್ಲೆಲ್ಲಾ ಜನರು ಕತ್ತಲೆಯಲ್ಲೇ ಬಸ್ಸುಗಳಿಗೆ ಕಾಯಬೇಕು. ಮಹಿಳೆಯರು, ಮಕ್ಕಳು ಆತಂಕದಿಂದಲೇ ಕತ್ತಲೆಯಲ್ಲೇ ಓಡಾಡಬೇಕು. ಸಂಜೆಯಾದರೆ ಸಾರ್ವಜನಿಕರಿಗೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಬೆಳಕೇ ಗತಿ. ಇದರಲ್ಲೂ ಕೆಲವೊಮ್ಮೆ ರಸ್ತೆ ದಾಟುವ ಪಾದಚಾರಿಗಳ ಕಣ್ಣಿಗೆ ವಾಹನಗಳ ಬೆಳಕು ಕುಕ್ಕಿ ಅಪಘಾತವಾಗುವ ಸಂಭವವೂ ಇದೆ.
ಇದರೊಂದಿಗೆ ರಾತ್ರಿ ಪಾಳಿ ಕೆಲಸಕ್ಕೆ ಹೋಗು ವವರಿಗೆ, ಕೋಚಿಂಗ್‌ ತೆರಳುವ ವಿದ್ಯಾರ್ಥಿ ಗಳಿಗೂ ಅಭದ್ರತೆ ತಪ್ಪಿದ್ದಲ್ಲ. ರಾತ್ರಿ ಎಂಟರ ಬಳಿಕ ಜನ ಸಂಚಾರವೂ ಕಡಿಮೆಯಾಗುತ್ತದೆ. ಇಂಥ ಸಂದರ್ಭದ ನಿರ್ಜನ ವಾತಾವರಣ ಹಾಗೂ ಕತ್ತಲೆ ಕಿಡಿಗೇಡಿಗಳಿಗೆ ವರದಾನವಾಗಿದೆ.

ಇಂಥದೊಂದು ಬೃಹತ್‌ ಸಮಸ್ಯೆಗೆ ಪರಿಹಾರ ಕೇಳ ಹೊರಟರೆ ಒಂದೆರಡು ತಿಂಗಳಲ್ಲಿ ಲೈಟಿಂಗ್‌ ವ್ಯವಸ್ಥೆ ಮಾಡಲಾಗುವುದು ಎಂಬ ಆಶ್ವಾಸನೆ ಮೂರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.
ಲಭ್ಯ ಮಾಹಿತಿ ಪ್ರಕಾರ ಈ ಸಮಸ್ಯೆಗೆ ಟೆಂಡರ್‌ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷ ಕಾರಣ ಎನ್ನಲಾಗುತ್ತಿದೆ. ಆದರೆ ಅದನ್ನು ಬಗೆಹರಿಸಿ ಸೌಲಭ್ಯ ಕಲ್ಪಿಸಲು ಮೂರು ವರ್ಷಗಳು ಬೇಕೇ ಎಂದು ಕೇಳಿದರೆ ಅದಕ್ಕೆ ಸ್ಪಷ್ಟ ಉತ್ತರವಿಲ್ಲ. ಅದರ ಬದಲಾಗಿ ಕೇಳಿದಾಗಲೆಲ್ಲ ಇನ್ನು ಎರಡು ತಿಂಗಳ ಒಳಗೆ ಸಂಪೂರ್ಣ ಎಲ್‌ಇಡಿ ಲೈಟ್‌ ಅಳವಡಿಸಲಾಗುವುದು ಎಂಬ ಉತ್ತರ ಜನಪ್ರತಿನಿಧಿಗಳಿಂದ ಬರುತ್ತಿದೆ. ಉಳಿದಂತೆ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಜನರ ದೂರು.

ಬೀದಿ ದೀಪಗಳ ಬೆಳಕು ಸಾಲದು
ಅಲೆವೂರು, ಇಂಡಸ್ಟ್ರಿಯಲ್‌ ಪ್ರದೇಶದ ಕಡೆಗೆ ಸಾಗುವ ರಸ್ತೆಯಲ್ಲಿ ಕೆಲವೆಡೆ ಬೀದಿ ದೀಪ ಬೆಳಗುತ್ತಿಲ್ಲ. ಆರ್‌ಎಸ್‌ಬಿ ಭವನದಲ್ಲಿರುವ ಹೈಮಾಸ್ಟ್‌ ದೀಪ ಮಾತ್ರ ಸ್ವಲ್ಪ ಮಟ್ಟಿಗೆ ಬೆಳಕು ನೀಡುತ್ತಿದೆ. ಅಂಚೆ ಕಚೇರಿ ಸಮೀಪ ಒಂದು ಮಾತ್ರ ಬೀದಿ ದೀಪವಿದ್ದು, ಅದು ಹೆಚ್ಚು ಪ್ರಕಾಶಮಾನವಾಗಿಲ್ಲ. ಒಟ್ಟಾರೆಯಾಗಿ ಈ ಪರಿಸರದಲ್ಲಿ ಬೀದಿದೀಪಗಳ ಸಮಸ್ಯೆ ಹೆಚ್ಚಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

ಟೆಂಡರ್‌ ಪ್ರಕ್ರಿಯೆ ಅಂತಿಮ
ಪರ್ಕಳದಿಂದ ಮಲ್ಪೆ, ಮಣಿಪಾಲ ಉಪೇಂದ್ರ ಟಿ. ಪೈ ವೃತ್ತದಿಂದ ಅಂಬಾಗಿಲು, ಮಣಿಪಾಲದ ಅಂಚೆ ಕಚೇರಿಯಿಂದ ಅಲೆವೂರು ರಸ್ತೆವರೆಗೆ ಮೂರು ಪ್ರತ್ಯೇಕ ಟೆಂಡರ್‌ ಅಂತಿಮಗೊಂಡಿದೆ. ಒಟ್ಟು 630 ಪೋಲ್‌ಗ‌ಳನ್ನು ಅಳವಡಿಸಿ ಸ್ಮಾರ್ಟ್‌ ಬೀದಿ ದೀಪ ವ್ಯವಸ್ಥೆ ಅಳವಡಿಸಲಾಗುವುದು. ಶೀಘ್ರವೇ ಕಾಮಗಾರಿ ನಡೆಯಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಉಡುಪಿ-ಮಣಿಪಾಲ ಹೆದ್ದಾರಿ ಸೇರಿದಂತೆ ಎಲ್ಲ 35 ವಾರ್ಡ್‌ಗಳಲ್ಲಿ 20 ಸಾವಿರ ಎಲ್‌ಇಡಿ ಬಲ್ಬ್ ಅಳವಡಿಸುವ ಯೋಜನೆ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಸರಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಶೀಘ್ರವೇ ಜಾರಿಗೊಳಿಸುತ್ತೇವೆ.
– ಸುಮಿತ್ರಾ ನಾಯಕ್‌, ಅಧ್ಯಕ್ಷೆ, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next