Advertisement
ಉಡುಪಿ ನಗರ ಬೆಳೆಯುತ್ತಿದ್ದಂತೆ ವಾಹನಗಳ ಓಡಾಟ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ಉಡುಪಿ ನಗರ ಅಗಾಧ ಪ್ರಮಾಣದಲ್ಲಿ ಬೆಳೆದಿದೆ. ಅಷ್ಟೇ ಪ್ರಮಾಣದಲ್ಲಿ ಟ್ರಾಫಿಕ್ ದಟ್ಟಣೆ,
ನಗರದ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲಿ ವೇಗದ, ನಿರ್ಲಕ್ಷ್ಯದ ಚಾಲನೆ ಹೆಚ್ಚುತ್ತಿದೆ. ಶುಕ್ರವಾರ ಒಂದೇ ದಿನ ಇಬ್ಬರು ಪಾದಚಾರಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಗುಂಡಿಬೈಲು, ನಿಟ್ಟೂರು ಬಾಳಿಗ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವಾಹನಗಳಿಗೆ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸಂತೆಕಟ್ಟೆ-ಅಂಬಾಗಿಲು-ಅಂಬಲಪಾಡಿ, ಮಲ್ಪೆ-ಕಲ್ಮಾಡಿ, ಪೆರಂಪಳ್ಳಿ-ಅಂಬಾಗಿಲು, ಡಿಸಿ ಕಚೇರಿ -ಸಿಂಡಿಕೇಟ್ ಸರ್ಕಲ್, ಗುಂಡಿಬೈಲು-ಕಲ್ಸಂಕ ರಸ್ತೆ, ಕಡಿಯಾಳಿ, ಕುಂಜಿಬೆಟ್ಟು, ಎಂಜಿಎಂ, ಮಣಿಪಾಲ-ಅಲೆವೂರು ರಸ್ತೆ, ಶಿರಿಬೀಡು, ಬನ್ನಂಜೆ ಈ ರಸ್ತೆಗಳಲ್ಲಿ ಸಣ್ಣಪುಟ್ಟ ಮತ್ತು ಗಂಭೀರ ಅಪಘಾತ ಸಂಖ್ಯೆ ನಿರಂತರವಾಗಿದೆ. ಅನಧಿಕೃತ ಪಾರ್ಕಿಂಗ್, ವೇಗದ ಚಾಲನೆ, ಅವೈಜ್ಞಾನಿಕ ರಸ್ತೆ ಡಿವೈಡರ್‌ನ ತಿರುವು ಅಪಘಾತ ಹೆಚ್ಚಲು ಕಾರಣ ಎನ್ನುತ್ತಾರೆ ಸ್ಥಳೀಯರು.
Related Articles
ಎಷ್ಟೇ ಸಂಚಾರ ನಿಯಮ ಬಿಗು ಇದ್ದರೂ ಟ್ರಾಫಿಕ್ ದಟ್ಟಣೆ ನಡುವೆಯೂ ಕೆಲವು ದ್ವಿಚಕ್ರ, ಕಾರು ಚಾಲಕರು ವೇಗ ತಗ್ಗಿಸದೆ ವಾಹನ ಚಾಲನೆ ಮಾಡುವ ಮೂಲಕ ಅಪಘಾತ ಸಂಭವಿಸಲು ಕಾರಣವಾಗುತ್ತಿದ್ದಾರೆ. ವೇಗದ ವಾಹನ ಚಾಲನೆ ಮಾಡುವರನ್ನು ಸಂಚಾರಿ ಪೊಲೀಸರು ಅಲ್ಲಲ್ಲಿ ತಡೆದು ದಂಡ ವಿಧಿಸುತ್ತಿದ್ದಾರೆ. ಪೊಲೀಸರ ದಂಡ ಬಿಸಿಗೂ ಕೆಲವು ವಾಹನ ಸವಾರರು ಬಗ್ಗುತ್ತಿಲ್ಲ. ವೇಗದ ಚಾಲನೆಗೆ ಮದ್ಯ, ಇನ್ನಿತರೆ ಮಾದಕ ದ್ರವ್ಯ ವ್ಯಸನವು ಕಾರಣವಾಗುತ್ತಿದೆ. ರಸ್ತೆ ಸುರಕ್ಷತೆಗೆ ಅಳವಡಿಸಿದ ಬ್ಯಾರಿಕೇಡ್‌ಗೂ
ಸಹ ಢಿಕ್ಕಿ ಹೊಡೆಯುವ ಘಟನೆಗಳು ವರದಿಯಾಗಿವೆ.
Advertisement
ಇಲಾಖಾ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಸಂಚಾರ ನಿಯಮ ಮೀರುವ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ನಿರಂತರ ನಡೆಯುತ್ತಿದೆ. ನಗರ ವ್ಯಾಪ್ತಿಯಲ್ಲಿ ನಿರ್ಲಕ್ಷ್ಯ, ಅತೀವೇಗದ ವಾಹನ ಚಾಲನೆ ಬಗ್ಗೆ ನಿಗಾ ವಹಿಸಲಾಗಿದೆ. ಅತೀವೇಗ, ನಿರ್ಲಕ್ಷ್ಯದ ವಾಹನ ಚಾಲನೆ ಮಾಡದಂತೆ ಸಂಚಾರ ನಿಯಮಕ್ಕೆ ಸಂಬಂಧಿಸಿ ಇಲಾಖೆ ವತಿಯಿಂದ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ.
-ಶೇಖರ್, ಪಿಎಸ್‌ಐ, ಸಂಚಾರ ಪೊಲೀಸ್ ಠಾಣೆ, ಉಡುಪಿ. – ಅವಿನ್ ಶೆಟ್ಟಿ