ಹೊಸದಿಲ್ಲಿ: ಒಡಿಶಾ ವೈದ್ಯ ಕಾಲೇಜುಗಳ ಪ್ರಕರಣಗಳ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಲಂಚ ಸ್ವೀಕಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡ ಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಹಿರಿಯ ವಕೀಲರಾದ ಕಾಮಿನಿ ಜೈಸ್ವಾಲ್ ಎಂಬವರು ಸಲ್ಲಿಸಿದ್ದ ಈ ಮನವಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಆರ್.ಕೆ. ಅಗರ್ವಾಲ್, ಅರುಣ್ ಮಿಶ್ರಾ ಹಾಗೂ ಎ.ಎಂ. ಖಾನ್ವಿಲ್ಕರ್ ಅವರುಳ್ಳ ನ್ಯಾಯಪೀಠ, ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದರಿಂದ ಜನಸಾಮಾನ್ಯರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನಾವಶ್ಯಕವಾಗಿ ಅನುಮಾನ ಹುಟ್ಟಲು ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟು, ಮನವಿಯನ್ನು ತಿರಸ್ಕರಿಸಿತು.
ಮನವಿಯಲ್ಲಿ, ಪ್ರಕರಣದ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ವಿಚಾರಣೆ ನಡೆಸ ಬಾರದು ಎಂದು ಆದೇಶಿಸಬೇಕೆಂದು ಮಾಡಿದ್ದ ಕೋರಿಕೆ ಯನ್ನು “ಅನುಚಿತ’ ಎಂದು ಬಣ್ಣಿಸಿದ ನ್ಯಾಯಪೀಠ, ಇಡೀ ಮನವಿಯೇ ದುರುದ್ದೇಶಪೂರಿತ ಎಂದು ಕಿಡಿಕಾರಿತು.
ಇದು ನ್ಯಾಯಾಂಗಕ್ಕೆ ಕಳಂಕ ತರುವ ಮತ್ತೂಂದು ಪ್ರಯತ್ನವಾಗಿದ್ದು, ಹಿರಿಯ ವಕೀಲರು ಅನಾವಶ್ಯಕವಾಗಿ ಮೇಲ್ಮನವಿ ಗಳನ್ನು ಸಲ್ಲಿಸುವುದೇ ಬಹುದೊಡ್ಡ ಹಗರಣವೆಂದು ತೋರುತ್ತದೆ. ಘನ ಉದ್ದೇಶಗಳಿಲ್ಲದ ಇಂಥ ಮನವಿಗಳಿಗೆ ಪುರಸ್ಕಾರ ಸಿಗಬಾರದೆಂದು ತಾಕೀತು ಮಾಡಿತು. ಆದರೆ, ಈ ಮನವಿ ಸಲ್ಲಿಸಿದ್ದ ಜೈಸ್ವಾಲ್ ಅವರಿಗೆ ಯಾವುದೇ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಿಲ್ಲ.
ಎಫ್ಐಆರ್ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯ ಮೂರ್ತಿಗಳ ವಿರುದ್ಧ ಸಿಬಿಐ ಅಥವಾ ಪೊಲೀಸ್ ಇಲಾಖೆಯಿಂದ ಎಫ್ಐಆರ್ ದಾಖಲಿಸುವಂತಿಲ್ಲ ಎಂದು ಇದೇ ವೇಳೆ ನ್ಯಾಯಪೀಠ ಸ್ಪಷ್ಟವಾಗಿ ಹೇಳಿತು.ಈ ಬಗ್ಗೆ 1991ರಲ್ಲಿನ ಸಾಂವಿಧಾನಿಕ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಹಾಗೊಂದು ವೇಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸಿಬಿಐ, ಪೊಲೀಸ್ ತನಿಖೆಯಾಗಬೇಕೆಂದರೆ ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಅನುಮತಿ ಬೇಕು. ಸಿಜೆಐ ಅವರೇ ಯಾವು ದಾದರೂ ಪ್ರಕರಣದ ಆರೋಪಿ ಯಾಗಿದ್ದಲ್ಲಿ ಆಗ ರಾಷ್ಟ್ರಪತಿಯವರು ಒಂದು ನಿರ್ದಿಷ್ಟ ಕಾರ್ಯವಿಧಾನದ ಮೂಲಕ ತನಿಖೆಗೆ ಆದೇಶಿಸಬಹುದು ಎಂದು ಪೀಠ ಹೇಳಿತು. ಅಲ್ಲದೆ, ನ್ಯಾಯಾಂಗವು ಯಾವುದೇ ತನಿಖಾ ಸಂಸ್ಥೆಯ ಮರ್ಜಿಗೆ ಒಳಪಡಲ್ಲ ಎಂದು ಸುಪ್ರೀಂ ತೀಕ್ಷ್ಣವಾಗಿ ಹೇಳಿತು.