ಕೋಲಾರ: ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಜಾಗ ಗುರುತಿಸುವಲ್ಲಿ ಸ್ಥಳೀಯ ಸಂಸ್ಥೆಗಳ ವಿಳಂಬ ಧೋರಣೆಯಿಂದಾಗಿ ಮಾಲೂರು ಹಾಗೂ ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್ ಆರಂಭಕ್ಕೆ ನಿವೇಶನ ಸಮಸ್ಯೆ ಕಾಡುತ್ತಿದೆ.
ಸರ್ಕಾರದಿಂದ ಜಿಲ್ಲೆಗೆ ಮಂಜೂರಾಗಿರುವ ಇಂದಿರಾ ಕ್ಯಾಂಟೀನ್ ಪೈಕಿ ಮುಳಬಾಗಿಲಿನಲ್ಲಿ ಕಟ್ಟಡ ಅಡಿಪಾಯದ ಹಂತದಲ್ಲಿದ್ದರೆ, ಮಾಲೂರು ಹಾಗೂ ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್‌ಗೆ ನಿವೇಶನವನ್ನೇ ಸೂಚಿಸದ ಕಾರಣ ನನೆಗುದಿಗೆ ಬಿದ್ದಿದೆ.
ಪ್ರಸ್ತಾವನೆ: ಬಡವರು ಹಸಿದ ಹೊಟ್ಟೆಯಲ್ಲಿರಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಕಡಿಮೆ ದರಕ್ಕೆ ಒದಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ವಿಸ್ತರಿಸಿತ್ತು. ಅದರಂತೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ 2 ಕ್ಯಾಂಟೀನ್, ತಾಲೂಕು ಕೇಂದ್ರಗಳಲ್ಲಿ ತಲಾ 1 ಕ್ಯಾಂಟೀನ್‌ನಂತೆ ಒಟ್ಟು 6 ಜಿಲ್ಲೆಗೆ ಮಂಜೂರಾಗಿತ್ತು. ಕೆಜಿಎಫ್ ಹೊಸ ತಾಲೂಕು ರಚನೆಯಾಗಿರುವುದರಿಂದ ಕ್ಯಾಂಟೀನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಯಾಂಟೀನ್‌ಗೆ ಅವಶ್ಯವಿರುವ 50/80 ಅಳತೆಯ ನಿವೇಶನವನ್ನು ಆಯಾ ಸ್ಥಳೀಯ ಸಂಸ್ಥೆಗಳು ಒದಗಿಸಬೇಕಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಡೆ ಕ್ಯಾಂಟೀನ್ ಆರಂಭಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಸೂಕ್ತ ಸ್ಥಳವನ್ನು ಸಕಾಲದಲ್ಲಿ ಗುರುತಿಸಿ ನೀಡುವಲ್ಲಿ ಸ್ಥಳೀಯ ಸಂಸ್ಥೆಗಳ ವಿಳಂಬ ಧೋರಣೆಯಿಂದ ಮುಳಬಾಗಿಲು ಮತ್ತು ಮಾಲೂರಿನ ಜನತೆ ಇಂದಿರಾ ಕ್ಯಾಂಟೀನ್ ಊಟದ ಭಾಗ್ಯದಿಂದ ವಂಚಿತರಾಗಿದ್ದಾರೆ. ಜಿಲ್ಲೆಗೆ ಮಂಜೂರಾಗಿರುವ 6 ಇಂದಿರಾ ಕ್ಯಾಂಟೀನ್‌ಗಳು 2018ರ ನವೆಂಬರ್ ತಿಂಗಳಲ್ಲೇ ಪೂರ್ಣಗೊಂಡು ಲೋಕಾರ್ಪಣೆಗೊಳ್ಳ¸ೇಕಿತ್ತು. ಆದರೆ, ಇನ್ನೂ ಎರಡು ಕ್ಯಾಂಟೀನ್‌ಗೆ ಜಾಗದ್ದೇ ಸಮಸ್ಯೆಯಾಗಿದೆ.
ಅಡಿಪಾಯದಲ್ಲೇ ಕಟ್ಟಡ: ಮುಳಬಾಗಿಲು ಪಟ್ಟಣದಲ್ಲಿ ನೆಹರು ಪಾರ್ಕ್ ಸಮೀಪ ಗುರುತಿಸಿದ್ದ ಜಾಗಕ್ಕೆ ಆಕ್ಷೇಪ ವ್ಯಕ್ತವಾದ್ದರಿಂದ ಪ್ರಸ್ತುತ ಜಿಪಂ ಎಇಇ ಕಚೇರಿ ಸಮೀಪ ಕ್ಯಾಂಟೀನ್ ನಿರ್ಮಾಣಕ್ಕೆ ನಿವೇಶನ ನೀಡಲಾಗಿದೆ. ಲೋಕಸಮರಕ್ಕೂ ಮುನ್ನವೇ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಅಡಿಪಾಯದ ಕೆಲಸ ಮುಗಿಸಿ 2 ತಿಂಗಳು ಕಳೆ ದಿದ್ದು, ಉಳಿಕೆ ಕಾಮಗಾರಿ ಮುಂದುವರಿಸಿಲ್ಲ.
ನೂತನ ಅಧ್ಯಕ್ಷರ ಮೇಲೆ ಹೊಣೆ: ಮಾಲೂರಿನಲ್ಲಿ ಪಶುಪಾಲನಾ ಆಸ್ಪತ್ರೆ ಬಳಿ ಪುರಸಭೆ ಗುರುತಿಸಿರುವ ಜಾಗಕ್ಕೆ ತಾಪಂ. ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಸಮೀಪ ಜಾಗ ಗುರುತಿಸುವ ಕೆಲಸ ನಡೆದಿದೆ. ಈ ದಿಸೆಯಲ್ಲಿ ಪುರಸಭೆಗೆ ಆಯ್ಕೆಯಾಗಲಿರುವ ನೂತನ ಅಧ್ಯಕ್ಷರ ಮೇಲೆ ಗುರುತರ ಜವಾಬ್ದಾರಿ ಇದೆ.
ಮತ್ತೂಂದು ಜಾಗ ಗುರುತಿಸಿಲ್ಲ: ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್‌ಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ಗುರುತಿಸಿದ ಜಾಗಕ್ಕೆ ನಿಗಮ ನಿರಪೇಕ್ಷಣಾ ಪತ್ರ ನೀಡದ್ದರಿಂದ ಆ ಸ್ಥಳ ಕೈ ಬಿಡಲಾಗಿದ್ದು, ಬೇರೆಡೆ ಜಾಗ ನೀಡುವಲ್ಲಿ ನಗರಸಭೆ ವಿಫಲವಾಗಿದೆ.
ಶ್ರೀನಿವಾಸಪುರ ವೃತ್ತದ ಆಸುಪಾಸು ಜಾಗ ನೀಡುವ ಬಗ್ಗೆ ಮಾತು ಕೇಳಿಬಂದಿತ್ತಾದರೂ ಅಂತಿಮಗೊಂಡಿಲ್ಲ. ಪ್ರಸ್ತುತ ಕೌನ್ಸಿಲ್ ಅವಧಿ ಮುಗಿದಿದ್ದು, ಗಮನಹರಿಸುವವರೂ ಇಲ್ಲವಾಗಿದೆ. ಒಟ್ಟಾರೆ ಕ್ಯಾಂಟೀನ್ ಆರಂಭಕ್ಕೆ ನಿಗದಿಪಡಿಸಿದ್ದ ಗಡುವು ಮುಗಿದು 6 ತಿಂಗಳು ಕಳೆದರೂ ಇನ್ನೂ 3 ಕ್ಯಾಂಟೀನ್ ಸ್ಥಾಪನೆಯಾಗಿಲ್ಲ. ಕ್ಷೇತ್ರದ ಶಾಸಕರಾದರೂ ಮಧ್ಯ ಪ್ರವೇಶಿಸಿ ಮುಳಬಾಗಿಲಿನಲ್ಲಿ ಆರಂಭಿಸಿರುವ ಕಾಮಗಾರಿ ಶೀಘ್ರ ಮುಗಿಸಲು ಹಾಗೂ ಇನ್ನು ಎರಡು ಕಡೆ ಆದಷ್ಟು ಬೇಗ ಜಾಗ ಗುರುತಿಸಿ ನೀಡುವಲ್ಲಿ ಕಾಳಜಿ ತೋರುವರೇ ಎಂಬುದನ್ನು ಕಾದು ನೋಡಬೇಕಷ್ಟೆ.