Advertisement
ನೆರೆ ಪೀಡಿತ ಪ್ರದೇಶಗಳಲ್ಲಿನ ಜನರು ಹಲವು ಸಮಸ್ಯೆಗಳನ್ನು ಇನ್ನೂವರೆಗೆ ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರಕಾರದಿಂದ ಸಮರ್ಪಕ ಪರಿಹಾರ ಸಿಗದೇ ಇರುವುದರಿಂದ ಹಲವಾರು ಕಾನೂನುಗಳ, ಹಕ್ಕು ಹಾಗೂ ನೀತಿಗಳ ಉಲ್ಲಂಘನೆಯಾಗುತ್ತಿದೆ ಎಂಬ ಅಸಮಾಧಾನ ವಿವಿಧ ಸರಕಾರೇತರ ಸಂಘ ಸಂಸ್ಥೆಗಳಿಂದ ವ್ಯಕ್ತವಾಗಿದೆ.
Related Articles
Advertisement
ಜಿಲ್ಲಾಧಿಕಾರಿಗೆ ಹಾಗೂ ಸ್ಥಳೀಯವಾಗಿ ಅಲ್ಲಿನ ಸರಕಾರ (ಗ್ರಾಮ ಪಂಚಾಯತ್)ಗಳಿಗೆ ಸಂಪೂರ್ಮಾ ಹಿತಿ ಇರುತ್ತದೆ. ಅದರಲ್ಲೂ ಪಂಚಾಯತ್‌ಗಳಲ್ಲಿ ಮನೆ ಮನೆ ಮಾಹಿತಿ ಲಭ್ಯವಿರುತ್ತದೆ. ಹೀಗಿರುವಾಗ ಮನೆ ಬಿದ್ದಿರುವುದಕ್ಕೆ ಪರಿಹಾರ ನೀಡಲು ಇದಕ್ಕಿಂತ ಬೇರೆ ದಾಖಲೆಗಳು ಬೇಕೆ. ಸಂತ್ರಸ್ತರನ್ನು ಇದೇ ವಿಷಯದಲ್ಲಿ ಬಹಳ ಸತಾಯಿಸಲಾಗುತ್ತಿದೆ ಎಂಬುದು ಜಾಗೃತಿ ಮಹಿಳಾ ಒಕ್ಕೂಟದ ಸದಸ್ಯರ ಆರೋಪ. ಹುಕ್ಕೇರಿ ತಾಲೂಕಿನ ಪಾಶ್ಚಾಪುರದಲ್ಲಿ 280 ಕ್ಕೂ ಅಧಿಕ ಮನೆಗಳು ಬಿದ್ದಿವೆ. ಬಿದ್ದಿರುವ ಮನೆಗಳಿಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಮನೆ ಮಾಲೀಕರಿಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ಯಾವುದೇ ಕಾನೂನಾತ್ಮಕ ಸಲಹೆ ಹಾಗೂ ಮಾರ್ಗದರ್ಶನ ಸಿಗುತ್ತಿಲ್ಲ. ಈ ಸಂತ್ರಸ್ತರಿಗೆ ಪ್ರತಿ ಹೆಜ್ಜೆಗೂ ಸಹಾಯ ಹಾಗೂ ಬೆಂಬಲದ ಅಗತ್ಯವಿದೆ ಎಂಬುದು ಸಾಮಾಜಿಕ ಹೋರಾಟಗಾರ ಹಾಗೂ ಪರಿಸರವಾದಿ ಶಿವಾಜಿ ಕಾಗಣೀಕರ ಅಭಿಪ್ರಾಯ.
ಮನೆ ಕಳೆದುಕೊಂಡವರಲ್ಲಿ ಅನೇಕರು ವಯಸ್ಸಾದವರಿದ್ದಾರೆ. ಅವರಿಗೆ ಐದು ಲಕ್ಷ ಅಲ್ಲ 10 ಲಕ್ಷ ರೂ ಪರಿಹಾರ ಕೊಟ್ಟರೂ ಏನು ಪ್ರಯೋಜನ. ಅದರ ಬದಲಾಗಿ ಒಬ್ಬರು ನಿಂತು ಮನೆ ಕಟ್ಟಿಸಿಕೊಡುವ ವ್ಯವಸ್ಥೆಯಾಗಬೇಕು. ಇದು ಸ್ಥಳೀಯ ಸರಕಾರದ ಜವಾಬ್ದಾರಿ ಎನ್ನುತ್ತಾರೆ ದಿ ಕನ್ಸರ್ನ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ನಿರ್ದೇಶಕಿ ಕವಿತಾ ರತ್ನಾ. ಮನೆಗಳ ಸಮೀಕ್ಷೆ ಎಲ್ಲಿಯೂ ಸಮರ್ಪಕವಾಗಿ ಆಗಿಲ್ಲ. ಪರಿಹಾರ ನೀಡುವಲ್ಲಿ ಮಾಡಲಾಗಿರುವ ವರ್ಗಿಕರಣದಲ್ಲೂ ಅನೇಕ ತೊಡಕುಗಳಿವೆ. ಹೆಚ್ಚಿನ ಜನರಿಗೆ ತಮ್ಮ ಮನೆಗಳನ್ನು ಯಾವ ವರ್ಗಿಕರಣದಲ್ಲಿ ಹಾಕಿದ್ದಾರೆ. ಅದಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಸಮೀಕ್ಷೆ ಮಾಡುವಾಗ ಸ್ಥಳೀಯ ಸರಕಾರದ ಪ್ರತಿನಿಧಿಗಳಿಗಿಂತ ಮಹಿಳೆಯರು ಹಾಗೂ ಮಕ್ಕಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ಮಾಡಬೇಕು.
ಅವರಿಂದಲೇ ನಿಜವಾದ ಮಾಹಿತಿ ಸಿಗುತ್ತದೆ. ಎಲ್ಲಿ ಯಾರ ಮನೆ ಎಷ್ಟು ಪ್ರಮಾಣದಲ್ಲಿ ಬಿದ್ದಿದೆ ಎಂದು ಅವರೇ ಹೇಳುತ್ತಾರೆ ಎಂಬುದು ನಿರ್ದೇಶಕಿ ಕವಿತಾ ರತ್ನಾ ಅವರ ಹೇಳಿಕೆ. ಎ ಕೆಟಗರಿಯಲ್ಲಿ ಗುರುತಿಸಲಾದ ಮನೆಗಳ ಪೈಕಿ ಕೆಲವರಿಗೆ ಈಗಾಗಲೇ ಮೊದಲ ಕಂತಿನಲ್ಲಿ ಒಂದು ಲಕ್ಷ ರೂ. ಜಮಾ ಆಗಿದೆ. ಆದರೆ ಸರಿಯಾದ ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಈ ಪರಿಹಾರದ ಹಣ ಸಿಕ್ಕಿಲ್ಲ. ನೆರೆಯಿಂದ ಶಿಥಿಲವಾಗಿರುವ ಮನೆಗಳನ್ನು ಪರಿಹಾರದ ಹಣ ನೀಡಲು ಪರಿಗಣಿಸಬೇಕು. ಕಾನೂನಿನ ತೊಡಕು ಎದುರಿಸುತ್ತಿರುವ ಸಂತ್ರಸ್ತರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂಬುದು ನೆರೆ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳ ಆಭಿಪ್ರಾಯ.
ನೆರೆ ಪೀಡಿತ ಜಿಲ್ಲೆಗಳಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಕಾರ್ಯತಂತ್ರ ರಚನೆಯಾಗಬೇಕುಎಂಬ ಕಾನೂನು ಇದೆ. ಆದರೆ ಯಾವ ಜಿಲ್ಲೆಯಲ್ಲೂ ಇದು ಕಾಣುತ್ತಿಲ್ಲ. ಪ್ರವಾಹದಿಂದ ಅನೇಕ ಕಡೆ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಕೆಲವು ಕಡೆ ಸಂಪೂರ್ಣ ಬಿದ್ದಿವೆ. ಕೆಲವು ಕಡೆ ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸಲಾಗುತ್ತಿದ್ದು ಇದರಿಂದ ಮಕ್ಕಳ ಕಲಿಕೆಯ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತಿದೆ. ಇದಕ್ಕೆ ಸರಕಾರದಿಂದ ಖಚಿತ ಉತ್ತರ ಇಲ್ಲ. ಶಾಲಾ ಕೊಠಡಿಗಳ ದುರಸ್ತಿ ಹಾಗೂ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು ಎಂಬುದು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಹಾಗೂ ಜಾಗೃತಿ ಮಹಿಳಾ ಒಕ್ಕೂಟದ ಸದಸ್ಯರ ಆಗ್ರಹ.
-ಕೇಶವ ಆದಿ