ಲಕ್ನೋ:ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ ಯಾವುದೇ ಧಾರ್ಮಿಕ ಅಥವಾ ಸಾರ್ವಜನಿಕ ಸಮಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ಶುಕ್ರವಾರ (ಆಗಸ್ಟ್ 28, 2020) ತಿಳಿಸಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಾನೀಶ್ ಕುಮಾರ್ ಅವಾಸ್ಥಿ ತಿಳಿಸಿರುವ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೆಪ್ಟೆಂಬರ್ 30ರವರೆಗೆ ಯಾವುದೇ ಧಾರ್ಮಿಕ ಅಥವಾ ಸಾರ್ವಜನಿಕ ಸಮಾರಂಭಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿರುವುದಾಗಿ ವರದಿ ಹೇಳಿದೆ.
ಅಷ್ಟೇ ಅಲ್ಲ ಶನಿವಾರ ಮತ್ತು ಭಾನುವಾರ ಮಾರುಕಟ್ಟೆ ಬಂದ್ ಸೇರಿದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್ 19 ವೈರಸ್ ಅನ್ನು ಹೊಡೆದೋಡಿಸಲು ಎಲ್ಲರೂ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸುವುದು ತುಂಬಾ ಮುಖ್ಯವಾಗಿದೆ. ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಕಾನೂನು ಮತ್ತು ನಿರ್ಬಂಧ ಉಲ್ಲಂಘಿಸಿದ ಜನರಿಂದ ಸುಮಾರು 70 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ಲಾಕ್ ಡೌನ್ ನಂತರ ಕಾನೂನು ಉಲ್ಲಂಘನೆ ಆರೋಪದಡಿ 69,765 ವಾಹನಗಳನ್ನು ವಶಪಡಿಸಿಕೊಂಡಿದ್ದು, 2.5ಲಕ್ಷ ಜನರ ವಿರುದ್ಧ ಸೆಕ್ಷನ್ 188ರ ಅಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.