ಮನಿಲಾ: ಸರಕಾರದ ಸಾರಿಗೆ ಕಾರ್ಯಕ್ರಮದಡಿ ತಮ್ಮ ಪ್ರದೇಶಗಳಿಗೆ ಮರಳುವ ಉದ್ದೇಶದಿಂದ ಫಿಲಿಫೈನ್ಸ್‌ನ ಸಾವಿರಾರು ಮಂದಿ ಕೋವಿಡ್ ವೈರಸ್‌ನ ಸೋಂಕು ಹರಡುವ ಅಪಾಯದ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇಲ್ಲಿನ ಬೇಸ್‌ಬಾಲ್ ಕ್ರೀಡಾಂಗಣದಲ್ಲಿ ಸೇರಿದ ಘಟನೆ ಮನಿಲಾದಲ್ಲಿ ಶನಿವಾರ ನಡೆದಿದೆ.
ಮನಿಲಾದಲ್ಲಿ ಉಳಿದುಕೊಂಡಿರುವ ಸಾವಿರಾರು ಮಂದಿಗೆ ಅವರವರ ಪ್ರದೇಶಗಳಿಗೆ ತೆರಳಲು ಫಿಲಿಫೈನ್ಸ್ ಸರಕಾರವು ಸರಕಾರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು ಮತ್ತು ಈ ಕಾರಣಕ್ಕಾಗಿ ಪ್ರತಿಯೊಬ್ಬರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಕಳುಹಿಸುವ ನಿಟ್ಟಿನಲ್ಲಿ ಮನಿಲಾದ ರಿಝಲ್ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಸೇರುವಂತೆ ಸೂಚಿಸಿತ್ತು. ಸರಕಾರದ ಈ ಆದೇಶದಂತೆ ಜನರು ಕ್ರೀಡಾಂಗಣದಲ್ಲಿ ಸೇರಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾತ್ರ ಮರೆತಿದ್ದರು. ಕೋವಿಡ್ ಸಂಕಷ್ಟದಿಂದಾಗಿ ಉದ್ಯೋಗ ಕಳೆದುಕೊಂಡ ಹಲವು ಮಂದಿ ತಮ್ಮ ತಾಯ್ನಾಡಿಗೆ ತೆರಳಲು ಬಯಸಿದ್ದರು.
ಕ್ರೀಡಾಂಗಣಕ್ಕೆ ಆಗಮಿಸುವಂತೆ ಅಧಿಕಾರಿಗಳು 7,500 ಮಂದಿಗೆ ಸೂಚನೆ ನೀಡಿದ್ದರು. ಆದರೆ ಸರಕಾರ ಬಸ್‌ನ ವ್ಯವಸ್ಥೆ ಮಾಡಿದೆ ಎಂಬ ಸುದ್ದಿ ತಿಳಿದು ಇನ್ನೂ 2 ಸಾವಿರದಷ್ಟು ಜನರು ಕ್ರೀಡಾಂಗಣಕ್ಕೆ ನುಗ್ಗಿದ ಕಾರಣ ಗೊಂದಲ ಏರ್ಪಟ್ಟಿತ್ತು. ಜನರ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ಅವರನ್ನು ನಿಯಂತ್ರಿಸಲು ಪೊಲೀಸರಿಂದಲೂ ಸಾಧ್ಯವಾಗಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೋಲಿಸರು ವಿನಂತಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಿರಿಯರು, ಮಕ್ಕಳು, ಗರ್ಭಿಣಿಯರು ಸೇರಿದಂತೆ ಯಾರೂ ಕೂಡ ಅಂತರ ಕಾಪಾಡದೇ ಒಟ್ಟೊಟ್ಟಿಗೆ ಇದ್ದು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ.
ಕೋವಿಡ್ ವೈರಸ್ ತೀವ್ರ ಗತಿಯಲ್ಲಿ ಹರಡುತ್ತಿದ್ದ ಹಿನ್ನೆಲೆ ಯಲ್ಲಿ ಲಾಕ್‌ಡೌನ್ ವಿಧಿಸಿದ್ದರಿಂದ ಸಾವಿರಾರು ಮಂದಿ ಮನಿಲಾದಲ್ಲಿ ಸಿಲುಕಿದ್ದರು. ಇದೀಗ ಅವರಿಗೆ ತಮ್ಮ ತಾಯ್ನಾಡಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದರಿಂದ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಸಾರಿಗೆ ವ್ಯವಸ್ಥೆಯ ಉಸ್ತುವಾರಿ ಸಹಾಯಕ ಕಾರ್ಯದರ್ಶಿ ಜೊಸೆಫ್ ಎಂಕಾಬೊ ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ ಸೇರಿದ ಜನರಲ್ಲಿ ಆಸ್ಟ್ರೇಲಿಯದಲ್ಲಿ ವೆಲ್ಡರ್ ಆಗಿರುವ 40ರ ಹರೆಯದ ಫ್ರೆಡ್ ಮರಿಕ್ ಉಕೋಲ್ ಇದ್ದರು.