ಹೊಸದಿಲ್ಲಿ: ದೇಶದಲ್ಲಿ ಅಗತ್ಯಕ್ಕನುಗುಣವಾದ ಖಾದ್ಯ ತೈಲದ ಸಂಗ್ರಹವಿದ್ದು, ಇಂಡೋನೇಷ್ಯಾ ದಲ್ಲಿ ತಾಳೆ ಎಣ್ಣೆ ರಫ್ತಿನ ಮೇಲೆ ವಿಧಿಸಲಾಗಿರುವ ನಿಷೇಧದಿಂದ ಭಾರತದಲ್ಲಿ ಖಾದ್ಯ ತೈಲದ ಅಭಾವ ಕಾಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಸ್ಪಷ್ಟನೆ ನೀಡಿದೆ.
ದೇಶದಲ್ಲಿ ಸದ್ಯಕ್ಕೆ 21 ಲಕ್ಷ ಮೆಟ್ರಿಕ್ ಟನ್‌ನಷ್ಟು ಖಾದ್ಯ ತೈಲದ ಸಂಗ್ರಹವಿದೆ. ಮೇ ತಿಂಗಳ ಹೊತ್ತಿಗೆ ಇನ್ನೂ 12 ಲಕ್ಷ ಮೆಟ್ರಿಕ್ ಟನ್‌ನಷ್ಟು ಖಾದ್ಯ ತೈಲ ಸಂಗ್ರಹವಾಗಲಿದೆ.
ಉತ್ಪಾದನೆ ಸಮಾಧಾನಕರ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರಕಾರ, 2022ರ ಫೆಬ್ರವರಿಯಲ್ಲಿ ಸೋಯಾಬೀನ್ ಉತ್ಪಾದನೆ 126.10 ಲಕ್ಷ ಮೆಟ್ರಿಕ್‌ಟನ್‌ನಷ್ಟಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಇದು 112 ಲಕ್ಷ ಮೆಟ್ರಿಕ್ ಟನ್‌ನಷ್ಟಿತ್ತು. ಇನ್ನು, ಸಾಸಿವೆ ವಿಚಾರಕ್ಕೆ ಬರುವುದಾದರೆ, 2021-22ರಲ್ಲಿ ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಶೇ. 37ರಷ್ಟು ಹೆಚ್ಚು (ಅಂದರೆ 114 ಲಕ್ಷ ಮೆಟ್ರಿಕ್ ಟನ್) ಸಾಸಿವೆಯನ್ನು ಬೆಳೆಯಲಾಗಿದೆ.
ಆಮದಿನ ಪ್ರಮಾಣವೆಷ್ಟು?: ದೇಶದ ಒಟ್ಟಾರೆ ತೈಲದ ಬೇಡಿಕೆಯಲ್ಲಿ ಶೇ. 70ರಷ್ಟು ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾ ಗುತ್ತದೆ. ಅದರಲ್ಲಿ ತಾಳೆ ಎಣ್ಣೆಯ ಪಾಲು ಶೇ. 62ರಷ್ಟಿದೆ. ಆಮದು ಮಾಡಿಕೊಳ್ಳುವ ಎಣ್ಣೆ ಗಳಲ್ಲಿ ಸೋಯಾಬೀನ್ ಎಣ್ಣೆಯ ಪ್ರಮಾಣ ಶೇ. 22ರಷ್ಟಿದ್ದು, ಇದು ಹೆಚ್ಚಾಗಿ ಅರ್ಜೆಂಟೀನಾ, ಬ್ರೆಜಿಲ್‌ಗಳಿಂದ ಬರುತ್ತದೆ. ಇನ್ನು, ಸೂರ್ಯ ಕಾಂತಿ ಎಣ್ಣೆಯ ಆಮದು ಪ್ರಮಾಣ ಶೇ. 15 ರಷ್ಟಿದ್ದು, ಇದು ಮುಖ್ಯವಾಗಿ ಉಕ್ರೇನ್, ರಷ್ಯಾದಿಂದ ಬರುತ್ತದೆ.