Advertisement

ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರಕ್ಕಿಲ್ಲ ಭದ್ರತೆ

09:51 AM Apr 16, 2022 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಗಡಿ ಭಾಗದಿಂದ ಬೆಳ್ತಂಗಡಿ ಪೇಟೆ ವರೆಗಿನ ಬಡಮಂದಿಯ ಆರೋಗ್ಯ ರಕ್ಷಣೆಗಿರುವ ಏಕೈಕ ತಾಲೂಕು ಆಸ್ಪತ್ರೆಗೆ ಭದ್ರತೆ ಇಲ್ಲದಂತಾಗಿದೆ. ಕಾರಣ ಇಲ್ಲಿನ ತಡೆಗೋಡೆ ಅವ್ಯವಸ್ಥೆಗೆ ಮುಕ್ತಿ ಸಿಕ್ಕಿಲ್ಲ.

Advertisement

ಆಸ್ಪತ್ರೆ ಸುತ್ತ ಕಾಂಪೌಂಡ್‌ ರಚನೆ ಯಾಗದೆ ಪ್ರಸಕ್ತ ಇರುವ ಹಳೇ ಕೌಂಪೌಂಡ್‌ ಆಗಾಗ ಬೀಳುತ್ತಿದೆ. ನಾಲ್ಕು ವರ್ಷಗಳ ಹಿಂದೆ ಈಗಿರುವ ಕ್ಯಾಂಟೀನ್‌ ಭಾಗದಲ್ಲಿ ತಡೆಗೋಡೆ ಕುಸಿದು ಸುಮಾರು ಎರಡು ವರ್ಷಗಳ ಬಳಿಕ 10 ಮೀಟರ್‌ ನೂತನವಾಗಿ ತಡೆಗೋಡೆಯೇನೋ ರಚಿಸಲಾಗಿದೆ. ಆದರೆ ಉಳಿದಿರುವ ಭಾಗಕ್ಕೆ ಇನ್ನೂ ರಚನೆಯಾಗಿಲ್ಲ. ಈಗಿರುವ ಕಾಂಪೌಂಡ್‌ ಸಮೀಪದ ರಸ್ತೆಗೆ ವಾಲಿ ನಿಂತಿದ್ದು ಮಳೆಗಾಲದಲ್ಲಿ ಅಪಾಯ ಸಂಭವಿಸುವ ಭೀತಿಯಿದೆ. ಈ ಹಿಂದೆ ಕಾಂಪೌಂಡ್‌ ಕುಸಿದು ಪಕ್ಕದ ಮನೆಗಳ ಕೌಂಪೌಂಡ್‌ ಗೆ ಹಾನಿಯಾಗಿತ್ತು.

ಕಾಂಪೌಂಡ್‌ ರಚನೆಗೆ ಅನುದಾನ ಕೋರಿ ಆರೋಗ್ಯ ಇಲಾಖೆ ಎಂಜಿನಿಯರ್‌ ವಿಭಾಗಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಅನುದಾನ ತರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಕೋವಿಡ್‌ ಅವಧಿಯಲ್ಲಿ ಆಮ್ಲಜನಕ ಟ್ಯಾಂಕ್‌ ಆವಶ್ಯಕತೆ ಮನಗಂಡು ತರಾತುರಿಯಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಇಷ್ಟು ವರ್ಷ ನಡೆದರೂ ಕಾಂಪೌಂಡ್‌ ರಚನೆಯಾಗದಿರುವುದು ದುರಾದೃಷ್ಟ.

ಪಾರ್ಕಿಂಗ್‌ ಸಮಸ್ಯೆ

ತಾ| ಆಸ್ಪತ್ರೆಗೆ ತೆರಳುವಲ್ಲಿ ಎರಡು ಬದಿ ಹೊಟೇಲ್‌, ಅಂಗಡಿ ಮುಂಗಟ್ಟುಗಳಿವೆ. ಇಲ್ಲಿ ಖರೀದಿಗೆ ಬರುವ ಮಂದಿ ರಸ್ತೆಯಲ್ಲೇ ಪಾರ್ಕಿಂಗ್‌ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸ್‌ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಯಾವೊಂದು ಕ್ರಮ ಕೈಗೊಂಡಿಲ್ಲ.

Advertisement

ನೋಟಿಸ್‌ ನೀಡಲಾಗುವುದು

ಗಿಡಗಂಟಿ ತೆರವುಗೊಳಿಸುವಂತೆ ಪ.ಪಂ. ಈ ಹಿಂದೆ ಸೂಚನೆ ನೀಡಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾಂಪೌಂಡ್‌ ಒಳಗೆ ಏನೇ ಕ್ರಮ ಕೈಗೊಳ್ಳುವುದು ಆ ಇಲಾಖೆಯ ಜವಾಬ್ದಾರಿ. ಮತ್ತೂಮ್ಮೆ ಪರಿಶೀಲಿಸಿ ತೆರವುಗೊಳಿಸುವಂತೆ ನೋಟಿಸ್‌ ಜಾರಿ ಮಾಡಲಾಗುವುದು. -ಎಂ. ಎಚ್‌. ಸುಧಾಕರ್‌, ಪ.ಪಂ. ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next