ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಆಗಸ್ಟ್ ಅಂತ್ಯದವರೆಗೂ ಶಾಲೆಗಳನ್ನು ಆರಂಭಿಸುವುದೇ ಬೇಡ ಅಥವಾ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಶಾಲೆ ಆರಂಭಿಸಿ.
ತರಗತಿಗಳನ್ನು ಈ ವರ್ಷ ನಡೆಸುವುದೇ ಬೇಡ.
-ಇದು ಬಹುತೇಕ ಶಾಲಾ ಮಕ್ಕಳ ಹೆತ್ತವರು, ಪೋಷಕರ ಅಭಿಪ್ರಾಯ. ಶಾಲಾರಂಭಕ್ಕೆ ಸಂಬಂಧಿಸಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ಈ ಒತ್ತಾಸೆ ವ್ಯಕ್ತವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಹುತೇಕರು ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದ ಅನಂತರ ಅಥವಾ ಅಗತ್ಯ ಮುನ್ನೆಚ್ಚರಿಕೆ ಜಾರಿಯಾದ ಬಳಿಕವೇ ಶಾಲೆ ಆರಂಭವಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂರ್ವಪ್ರಾಥಮಿಕ ತರಗತಿಗಳನ್ನು ಈ ವರ್ಷ ತೆರೆಯುವುದೇ ಬೇಡ, ತೆರೆದರೂ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಬಹುತೇಕರು ಹೇಳಿದ್ದಾರೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ಕೆಲವು ಶಾಲೆಗಳು ಕ್ವಾರಂಟೈನ್ ಕೇಂದ್ರಗಳಾಗಿವೆ. ಅಂಥಲ್ಲಿ ಸಭೆ ನಡೆದಿಲ್ಲ. ಎಲ್ಲ ಶಾಲೆಗಳ ಅಭಿಪ್ರಾಯ ಬಂದ ಅನಂತರ ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಸೂಚನೆ ಬರಬೇಕು
ಪಾಲಕರ ಅಭಿಪ್ರಾಯ ಸಂಗ್ರಹ ಪೂರ್ಣಗೊಂಡ ಬಳಿಕವೂ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಅಭಿಪ್ರಾಯಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಅನಂತರ ಕೇಂದ್ರ ಗೃಹ ಇಲಾಖೆ, ಮಾನವ ಸಂಪದಭಿವೃದ್ಧಿ ಸಚಿವಾಲಯ, ಆರೋಗ್ಯ ಇಲಾಖೆ ಮಾರ್ಗಸೂಚಿಗಳಂತೆಯೇ ಶಾಲೆ ಆರಂಭಿಸಬೇಕಾಗುತ್ತದೆ. ಪಾಲಕರ ಅಭಿಪ್ರಾಯವೂ ಮುಖ್ಯವಾಗಿರುವುದರಿಂದ ಅದನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.