Advertisement

ನಾಟ್‌ವೆಸ್ಟ್‌ : ನಾಸಿರ್‌ “ನೋ’ಪ್ರತಿಕ್ರಿಯೆ

08:06 AM May 07, 2020 | Sriram |

ಲಂಡನ್‌: ಏಕದಿನ ಕ್ರಿಕೆಟ್‌ ಇತಿಹಾಸದ ಅಮೋಘ ಹಾಗೂ ಅತ್ಯಂತ ರೋಮಾಂಚಕ ಪಂದ್ಯಗಳ ಯಾದಿಯಲ್ಲಿ 2002ರ ಭಾರತ-ಇಂಗ್ಲೆಂಡ್‌ ನಡುವಿನ ನಾಟ್‌ವೆಸ್ಟ್‌ ಟ್ರೋಫಿ ಫೈನಲ್‌ಗೆ ಒಂದು ಸ್ಥಾನ ಇದ್ದೇ ಇದೆ. ಈ ಪಂದ್ಯವೀಗ ಲಾಕ್‌ಡೌನ್‌ ಸಮಯದಲ್ಲಿ ಮತ್ತೆ ಸುದ್ದಿ ಮಾಡಿದೆ.

Advertisement

ಐಸಿಸಿ ತನ್ನ ಟ್ವಿಟರ್‌ನಲ್ಲಿ ಈ ಪಂದ್ಯದ ಚಿತ್ರವೊಂದನ್ನು ಪೋಸ್ಟ್‌ ಮಾಡಿ, ಭಾರತೀಯರು ಸಂಭ್ರಮಿ ಸುತ್ತಿರುವ ಈ ಚಿತ್ರ ಯಾವ ನಾಟಕೀಯ ಫೈನಲ್‌ ಪಂದ್ಯದ್ದಾಗಿದೆ ಎಂದು ಅಭಿಮಾನಿಗಳನ್ನು ಕೇಳಿತ್ತು. ಇದಕ್ಕೆ ಎಲ್ಲರೂ ಸರಿಯುತ್ತರವನ್ನೇ ನೀಡಿದ್ದರು. ಆದರೆ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್‌ ಹುಸೇನ್‌ ಮಾತ್ರ “ನೋ’ (ಗೊತ್ತಿಲ್ಲ) ಎಂದು ಪ್ರತಿಕ್ರಿಯಿಸಿದ್ದಾರೆ!

ಉತ್ತರ ಗೊತ್ತಿದ್ದೂ ನಾಸಿರ್‌ ಹುಸೇನ್‌ “ಗೊತ್ತಿಲ್ಲ’ ಎಂದು ಜವಾಬು ನೀಡಿದರೇಕೆ ಎಂದು ತಿಳಿಯುವ ಮುನ್ನ ಈ ಪಂದ್ಯದ ರೋಚಕತೆಯನ್ನು ಮತ್ತೂಮ್ಮೆ ಕಣ್ತುಂಬಿಸಿಕೊಳ್ಳಬೇಕು.

ಯುವಿ-ಕೈಫ್ ಪರಾಕ್ರಮ
2002ರ ಜುಲೈ 13ರಂದು ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಈ ಫೈನಲ್‌ ಏರ್ಪಟ್ಟಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 5ಕ್ಕೆ 325 ರನ್‌ ಪೇರಿಸಿ ಸವಾಲೊಡ್ಡಿತ್ತು. ಮಾರ್ಕಸ್‌ ಟ್ರೆಸ್ಕೋಥಿಕ್‌ 109, ನಾಸಿರ್‌ ಹುಸೇನ್‌ 115 ರನ್‌ ಬಾರಿಸಿ ಮೆರೆದಿದ್ದರು. ಸೌರವ್‌ ಗಂಗೂಲಿ ಸಾರಥ್ಯದ ಭಾರತ 24 ಓವರ್‌ಗಳ ವೇಳೆ 146ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತ್ತು. ಆಗ ಜತೆಗೂಡಿದ ಯುವರಾಜ್‌ (69) ಮತ್ತು ಕೈಫ್ (ಅಜೇಯ 87) 6ನೇ ವಿಕೆಟಿಗೆ 121 ರನ್‌ ಪೇರಿಸಿ ಮುನ್ನುಗ್ಗಿದ್ದರು. 3 ಎಸೆತ ಉಳಿದಿರುವಾಗ 2 ವಿಕೆಟ್‌ ಜಯ ಸಾಧಿಸಿದ ಭಾರತ ಆಂಗ್ಲರಿಗೆ ಅವರದೇ ನೆಲದಲ್ಲಿ ಗರ್ವಭಂಗ ಮಾಡಿತ್ತು.

ಲಾರ್ಡ್ಸ್‌ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್‌ ಕಳಚಿ ಸಂಭ್ರಮಿಸಿದ ದೃಶ್ಯ ಈಗಲೂ ಆ ಪಂದ್ಯ ವೀಕ್ಷಿಸಿದವರ ಕಣ್ಮುಂದಿದೆ! ಅಂದಹಾಗೆ, ಈ ಪಂದ್ಯದಲ್ಲಿ ಇಂಗ್ಲೆಂಡಿನ ನಾಯಕರಾಗಿದ್ದವರು ಬೇರೆ ಯಾರೂ ಅಲ್ಲ, ನಾಸಿರ್‌ ಹುಸೇನ್‌! ಅವರು ಇನ್ನೂ ಆ ಆಘಾತ ಹಾಗೂ ಮುಜುಗರದಿಂದ ಹೊರ ಬರಲಿಲ್ಲವೋ ಏನೋ, ಆದ್ದರಿಂದಲೇ ಐಸಿಸಿಯ ಸವಾಲಿಗೆ “ನೋ’ ಎಂದು ಉತ್ತರಿಸಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next