Advertisement
ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸಂಬಂಧಿ ಸೇವೆಗಾಗಿ 6 ತಿಂಗಳುಗಳ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಸಿಬಂದಿ, ಮಂಗಳೂರು ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿ, ಹಿರಿಯ, ಕಿರಿಯ ಆರೋಗ್ಯ ಸಹಾಯಕರು ಸರಿಯಾಗಿ ಸಂಬಳ ಸಿಗದಿರುವುದರಿಂದ ಸಂಕಷ್ಟಕ್ಕೊಳಗಾಗಿದ್ದಾರೆ.
ಮನೆ ಬಾಡಿಗೆ, ಕರೆಂಟ್ ಬಿಲ್, ಸಾಲ ಮರುಪಾವತಿ, ವಿವಿಧ ಇಎಂಐ ಸಹಿತ ತಿಂಗಳಾರಂಭದಲ್ಲೇ ದುಡ್ಡಿನ ಆವಶ್ಯಕತೆ ಇದ್ದು, ಸಂಬಳ ಸಕಾಲಕ್ಕೆ ನೀಡದೇ ಇರುವುದರಿಂದ ಒತ್ತಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾ ಗಿದೆ ಎಂದು ಕೆಲವು ಸಿಬಂದಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಇದ್ದ ಮೂರು ಡಿಎಯನ್ನು ತೆಗೆದು ಹಾಕಲಾಗಿದೆ. 15 ಇಎಲ್‌ಗಳ ಸಂಬಳವನ್ನೂ ನೀಡಲಾಗುವುದಿಲ್ಲ ಎಂದಿದ್ದಾರೆ. ರಜೆಯನ್ನೂ ತೆಗೆದುಕೊಳ್ಳದೆ ಕೆಲಸ ಮಾಡುವವರಿಗೆ ಈ ಶಿಕ್ಷೆ ಯಾಕೆ ಎಂದು ಪ್ರಶ್ನಿಸುತ್ತಾರೆ ಸಿಬಂದಿ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿಗೆ ಎರಡು ತಿಂಗಳುಗಳಿಂದ ಸಂಬಳವೇ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
Related Articles
ಎಪ್ರಿಲ್, ಮೇ, ಜೂನ್ ತಿಂಗಳ ಸಂಬಳವನ್ನು ಜೂನ್‌ನಲ್ಲಿ ನೀಡಲಾಗಿದೆ. ಜುಲೈ ತಿಂಗಳ ಸಂಬಳ ಆಗಸ್ಟ್ ಮಧ್ಯಭಾಗದಲ್ಲಿ ನೀಡಲಾಗಿದೆ. ಆಗಸ್ಟ್ ಸಂಬಳವನ್ನು ಸೆಪ್ಟಂಬರ್ ತಿಂಗಳಾಂತ್ಯವಾದರೂ ನೀಡಿಲ್ಲ. ಇನ್ನು ಸೆಪ್ಟಂಬರ್ ಸಂಬಳ ಯಾವಾಗ ಬರುತ್ತದೆ ಎನ್ನುವುದೂ ಗೊತ್ತಿಲ್ಲ ಎನ್ನುತ್ತಾರೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬಂದಿ. ಸಂಬಳ ಬಗ್ಗೆ ಚರ್ಚಿಸಿದರೆ ಮೈಸೂರು ವಿಭಾಗೀಯ ಕಚೇರಿಗೆ ಬರೆದು ಕಳುಹಿಸಿದ ಅನಂತರ ಪ್ರಕ್ರಿಯೆಗಳು ಶುರುವಾಗುತ್ತವೆ. ಅಲ್ಲಿಂದ ಆದೇಶ ಬರಲು ತಡವಾಗುತ್ತದೆ ಎಂಬ ಉತ್ತರವನ್ನು ಆಸ್ಪತ್ರೆ ಸಂಬಂಧಿಸಿದ ಕೆಲವು ಅಧಿಕಾರಿಗಳು ನೀಡುತ್ತಾರೆ. ಅಲ್ಲದೆ ಕೆಲವರು ಸರಿಯಾಗಿ ಮಾಹಿತಿಯನ್ನೇ ನೀಡುವುದಿಲ್ಲ ಎಂಬುದು ಸಿಬಂದಿ ಆಪಾದನೆ.
Advertisement
ಧೃತಿಗೆಡಬಾರದುಸರಕಾರಿ ವ್ಯವಸ್ಥೆಯಲ್ಲಿ ಸಂಬಳ ಎಲ್ಲರಿಗೂ ನೀಡಲಾಗುತ್ತದೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಸ್ವಲ್ಪ ತಡವಾಗುತ್ತದೆ. ಅದಕ್ಕೆ ಯಾರೂ ಧೃತಿಗೆಡಬಾರದು. ಒಂದೆರಡು ತಿಂಗಳು ಮುಂದ ಕ್ಕೆ ಹೋದರೂ ಬಳಿಕ ಎಲ್ಲ ತಿಂಗಳಿನದ್ದು ಒಟ್ಟಿಗೇ ನೀಡಲಾಗುತ್ತದೆ. ದುಡಿತಕ್ಕೆ ಸರಿಯಾಗಿ ಸಂಬಳ ನೀಡದೇ ಇರುವುದಿಲ್ಲ.
-ಡಾ| ರಾಮಚಂದ್ರ ಬಾಯರಿ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ