Advertisement

ಅತಿಥಿ ಶಿಕ್ಷಕರಿಗೆ ಆರು ತಿಂಗಳಾದ್ರೂ ಆಗಿಲ್ಲ ಸಂಬಳ

04:40 PM Jan 21, 2020 | Suhan S |

ಸಿದ್ದಾಪುರ: ಪ್ರತಿವರ್ಷ ವರ್ಗಾವಣೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾಗುತ್ತಿವೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಸರಕಾರ ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಆದೇಶ ಮಾಡುತ್ತದೆ. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿವರ್ಷದಂತೆ ಈ ವರ್ಷವೂ ಗಂಗಾವತಿ ತಾಲೂಕಿನಾದ್ಯಂತ 340 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಫೆಬ್ರುವರಿ 11ಕ್ಕೆ 6 ತಿಂಗಳಾದರೂ ಅವರಿಗೆ ವೇತನ ನೀಡಿಲ್ಲ.

Advertisement

2019 ಜುಲೈ, 11ರಂದು ಅತಿಥಿ ಶಿಕ್ಷಕರನ್ನುಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು, ಇಲ್ಲಿತನಕ ಶಿಕ್ಷಕರಿಗೆ ಬಿಡಿಗಾಸು ನೀಡಿಲ್ಲ. ಆದರೆ ಅತಿಥಿ ಶಿಕ್ಷಕರು ಮಾತ್ರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಶಿಕ್ಷಣ ಇಲಾಖೆ ಪರಿಗಣಿಸದೇ ದಿನ ದೂಡುತ್ತ ಕಾಲಹರಣ ಮಾಡುತ್ತಿದೆ ಎನ್ನುವ ಆರೋಪಗಳು ಸಹ ಕೆಳಿಬರುತ್ತಿವೆ.

ಕಡಿಮೆ ಸಂಬಳ: ಇತ್ತೀಚೆಗೆ ಹಲವು ಇಲಾಖೆಗಳಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿರುವವರಿಗೂ ತಿಂಗಳಿಗೆ ಕನಿಷ್ಠ 18 ಸಾವಿರದಿಂದ 19 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಆದರೆ ಅತಿಥಿ ಶಿಕ್ಷಕರಿಗೆ ಮಾತ್ರ ಮಾಸಿಕ 7,500 ರೂ. ನೀಡಲಾಗುತ್ತಿದೆ. ಇಷ್ಟು ಕಡಿಮೆ ವೇತನ ನೀಡುತ್ತಿದ್ದರೂ ಶಿಕ್ಷಕರು ಮಾತ್ರ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಿದ್ದರೂ ವೇತನ ಮಾತ್ರ ಪ್ರತಿ ತಿಂಗಳು ದೊರೆಯದಿ ರುವುದು ವಿಪರ್ಯಾಸದ ಸಂಗತಿ.

ಸಂಕಷ್ಟ: ಐದು ತಿಂಗಳಿಂದ ವೇತನವಿಲ್ಲದೆ ದುಡಿಯುತ್ತಿರುವ ಅತಿಥಿ ಶಿಕ್ಷಕರು ಮತ್ತು ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ. ಕೊಡುವ ಅಲ್ಪ ಸಂಬಳವನ್ನು ಸರಿಯಾದ ಸಮಯಕ್ಕೆ, ಅಂದರೆ ತಿಂಗಳವಾರು ನೀಡದೇ ಇರುವುದರಿಂದ ಅಕ್ಷರಶಃ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿ: ಸರಕಾರದ ಆದೇಶ ಪ್ರಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಶಿಕ್ಷಣ ಇಲಾಖೆ ಕೇವಲ ಅವರಿಂದ ಕೆಲಸವನ್ನು ಮಾತ್ರ ಮಾಡಿಸಿಕೊಳ್ಳುತ್ತಿದೆ. ಇಲಾಖೆಯಲ್ಲಿ ಅತಿಥಿ ಶಿಕ್ಷಕರಿಗೆ ವೇತನ ಮಾಡಲು ಸಾಕಷ್ಟು ಅನುದಾನವಿದೆ. ಆದರೆ ಅಧಿಕಾರಿಗಳು ಪ್ರತಿ ತಿಂಗಳು ವೇತನ ಮಾಡಲು ಮನಸು ಮಾಡುತ್ತಿಲ್ಲ. ನಮಗೆ ಮೇಲಾಧಿ ಕಾರಿಗಳಿಂದ ಆದೇಶ ಬಂದಿಲ್ಲ ಎಂದು ಹೇಳುತ್ತ ಕಾಲ ಕಳೆಯುತ್ತಿರುವುದನ್ನು ನೋಡಿದರೆ ಅ ಧಿಕಾರಿಗಳ ಬೇಜವಾಬ್ದಾರಿ ಗೊತ್ತಾಗುತ್ತದೆ. ಒಟ್ಟಿನಲ್ಲಿ ಸಂಬಳವಿಲ್ಲದೇ ಶಿಕ್ಷಕರು ಕೆಲಸ ಮಾಡುವಂತಾಗಿದ್ದು, ಸಹನೆ ಕಳೆದುಕೊಂಡು ಇತರೆ ನೌಕರರ ಹಾಗೆ ಅವರು ಕೂಡ ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಸಂಬಳ ದೊರೆಯುತ್ತದೆಯೋ ಎಂಬ ಭಾವನೆ  ಮೂಡಿದೆ.

Advertisement

6-7 ತಿಂಗಳು ವೇತನವಿಲ್ಲದೇ ಸಂಸಾರ ಮುನ್ನಡೆಸುವುದು ಕಷ್ಟವಾಗಿದೆ. ಪ್ರತಿವರ್ಷ ನಮ್ಮನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಅಧಿಕಾರಿಗಳು ನಂತರ ದಿನಗಳಲ್ಲಿ ನಮ್ಮ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗಲ್ಲ. ಅದರಲ್ಲೂ ವೇತನವನ್ನು ನಾವು ಕೇಳಲೇಬಾರದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದಾಗಲೇ ನಮಗೆ ಸಂಬಳ. ಯಾವ ಒಬ್ಬ ಜನಪ್ರತಿನಿಧಿಗಳು ನಮ್ಮ ಪರವಾಗಿ ಧ್ವನಿ ಎತ್ತುವುದಿಲ್ಲ. ಹೆಸರು ಹೇಳಲು ಇಚ್ಛಿಸದ ಅತಿಥಿ ಶಿಕ್ಷಕರು

 

-ಸಿದ್ದನಗೌಡ ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next