ಕಲಾದಗಿ: ಮಹಾಪ್ರವಾಹಕ್ಕೆ ಕಿತ್ತು ಹೋಗಿದ್ದ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ಬಳಿಯ 200 ಮೀಟರ್ ರಸ್ತೆ ದುರಸ್ತಿ ಪೂರ್ಣಗೊಂಡಿದ್ದರೂ ರಕ್ಷಣಾ ಬ್ಯಾರಿಕೇಡ್ ಇಲ್ಲದೆ ವಾಹನ ಸವಾರರು ನಿತ್ಯ ಪ್ರಾಣ ಭಯದಲ್ಲೇ ಸಂಚಾರ ಮಾಡುವಂತಾಗಿದೆ.
ಮೂರು ತಾಲೂಕಿನ ಮೂವತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಲಾದಗಿ-ಕಾತರಕಿ ಬ್ರಿಜ್ ಕಂ ಬ್ಯಾರೇಜ್ ಬಳಿ ದಕ್ಷಿಣ ಭಾಗದ ಮಣ್ಣು ಏರು ರಸ್ತೆಗೆ ರಕ್ಷಣಾ ಬ್ಯಾರಿಕೇಡ್ ಅಳವಡಿಸಿಲ್ಲ. ಬಾಗಲಕೋಟೆ, ಬೀಳಗಿ, ಮುಧೋಳ ತಾಲೂಕಿನ ಹಲವು ಹಳ್ಳಿಗಳಿಗೆ ಸನಿಹ ಸಂಪರ್ಕ ರಸ್ತೆ ಕಲಾದಗಿ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ರಸ್ತೆ ರೈತರಿಗೆ, ವ್ಯಾಪಾರಸ್ಥರಿಗೆ ನಿತ್ಯ ಉಪಯೋಗಿ ಸಂಚಾರ ರಸ್ತೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ. ಬ್ಯಾರೇಜ್ ಬಳಿಯ ರಸ್ತೆಗೆ ಎರಡೂ ಕಡೆ ರಕ್ಷಣಾ ಬ್ಯಾರಿಕೇಡ್ ಇಲ್ಲಗಳೇ ಇಲ್ಲ.
ಸವಾರರ ಆಕ್ರೋಶ: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಉಂಟಾದ ಮಹಾಪ್ರವಾಹಕ್ಕೆ ಬ್ಯಾರೇಜ್ ಬಳಿಯ 200 ಮೀಟರ್ ರಸ್ತೆ ಸಮೇತ ಹಿಂದೆ ಅಳವಡಿಸಿದ್ದ ಕ್ರಾಸ್ ಬೇರಿಯರ್ ಕಿತ್ತು ಹೋಗಿದ್ದವು. ಪ್ರವಾಹ ಅಬ್ಬರ ಕಡಿಮೆಯಾದ ನಂತರ ತುರ್ತು ಕಾಮಗಾರಿಯಲ್ಲಿ ರಸ್ತೆ ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ರಸ್ತೆ ನಿರ್ಮಿಸಿ ನಾಲ್ಕು ತಿಂಗಳು ಕಳೆದರೂ ಇನ್ನೂ ಏರು ರಸ್ತೆಗೆ ಡಾಂಬರೀಕರಣ ಮಾಡಿಲ್ಲ, ಜೊತೆಗೆ ಸುರಕ್ಷತಾ ದೃಷ್ಟಿಯಿಂದ ಕ್ರಾಸ್ ಬ್ಯಾರಿಯರ್ ಜೋಡಣೆಯಾಗದಿರುವುದಕ್ಕೆ ಸಂಚಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಾದಗಿ ಭಾಗದ ನಾನಾ ಹಳ್ಳಿಗಳಿಂದ ಕುಂದರಗಿಯ ಶಾಲೆಗೆ ವಾಹನದಲ್ಲಿ ಮಕ್ಕಳು ತೆರಳುತ್ತಾರೆ. ರಸ್ತೆಗೆ ಅಗತ್ಯ ಭಾಗದಲ್ಲಿ ರಕ್ಷಣಾ ಬ್ಯಾರಿಕೇಡ್ ಅಳವಡಿಕೆ ಇಲ್ಲದಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
15 ಅಡಿ ಆಳ: ಬ್ಯಾರೇಜ್ ಬಳಿ ಮಣ್ಣು ಏರು ರಸ್ತೆಯಲ್ಲಿ ನಿರ್ಮಿಸಲಾಗಿದೆ. ಎರಡೂ ಕಡೆ ಹದಿನೈದು ಅಡಿಯಿಂದ ಇಪ್ಪತ್ತು ಅಡಿ ಆಳ ಹೊಂದಿದೆ. ವಾಹನ ಸಂಚಾರ ವೇಳೆ ಅನಾಹುತ ಸಂಭವಿಸಿದಲ್ಲಿ ಅನಾಹುತ ಖಚಿತ ಎನ್ನುವ ಆತಂಕದ ಭಾವನೆ ಮೂಡಿದೆ. ಪ್ರಮುಖ ರಸ್ತೆಗೆ ಕೂಡಲೇ ಡಾಂಬರೀಕರಣ ಮತ್ತು ರಸ್ತೆ ಕ್ರಾಸ್ ಬ್ಯಾರಿಯರ್ ಜೋಡಣೆ ಮಾಡಬೇಕೆಂದು ವಾಹನ ಸವಾರು ಸಾರ್ವಜನಿಕರ ಆಗ್ರಹವಾಗಿದೆ.
ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಲಾದಗಿ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ಬಳಿ ಕೈಗೊಂಡ ರಸ್ತೆ ದುರಸ್ತಿಗೆ ಡಾಬರೀಕರಣ ಮಾಡಬೇಕು ಮತ್ತು ರಸ್ತೆಗೆ ಕ್ರಾಸ್ ಬ್ಯಾರಿಯರ್ ಜೋಡಿಸಬೇಕು.
– ಬಸವರಾಜ ಬಳಲೋದ್, ಅಂಕಲಗಿ ಗ್ರಾಮಸ್ಥ
-ಚಂದ್ರಶೇಖರ ಆರ್.ಎಚ್