ಕಟಪಾಡಿ: ಕಾಲು ಸಂಕದ ಅಳಿದುಳಿದ ಅವಯವಗಳ ಅವಶೇಷದ ಮೇಲೆಯೇ ಹರಸಾಹಸಪಟ್ಟು ಶವದಹನಕ್ಕೆ ಪಾರ್ಥಿವ ಶರೀರ ಸಾಗಿಸಿದ ಘಟನೆ ರವಿವಾರ ಘಟಿಸಿದೆ.
ಪಾಂಗಾಳ ಗುಡ್ಡೆ ತುಂಗರಬೈಲಿನಲ್ಲಿ ಲಲಿತಾ (67) ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರದ ಅಂತಿಮ ಪ್ರಕ್ರಿಯೆ ಕೋಟೆ ಗ್ರಾ.ಪಂ.ನ ರುದ್ರಭೂಮಿಯಲ್ಲಿ ನಡೆಸಲು ಈ ಹರಸಾಹಸ ನಡೆದಿದೆ.
ಅಂದಾಜು 30 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಾಲು ಸಂಕವು ಇದೀಗ ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೆ ಅನಿವಾರ್ಯವಾಗಿ ಈ ಭಾಗದ ಜನತೆ ಇದೇ ಅಳಿದುಳಿದ ಕಾಲು ಸಂಕವನ್ನು ಅವಲಂಬಿಸಬೇಕಾಗಿದೆ.
ಒಂದೊಮ್ಮೆ ಕೈಪುಂಜಾಲು ಭಾಗದ ಸಮಸ್ತರಿಗೂ ಇದೇ ಕಾಲು ಸೇತುವೆ ಪ್ರಮುಖ ಸಂಪರ್ಕ ರಸ್ತೆಯಾಗಿತ್ತು ಎಂಬುದನ್ನು ಮೃತರ ಪುತ್ರ ಪ್ರದೀಪ್ ಸ್ಮರಿಸುತ್ತಾರೆ. ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್ ಮೂಲಕ ಶ್ಮಶಾನಕ್ಕೆ ಸಾಗಿಸಲು ಬಹಳಷ್ಟು ಪ್ರಯಾಸ ಪಡುವಂತಾಯಿತು ಎಂದು ಸಮಾಜ ಸೇವಕ ಆಸ್ಟಿನ್ ಕೋಟ್ಯಾನ್ ಕಟಪಾಡಿ ಉದಯವಾಣಿಗೆ ತಿಳಿಸಿದ್ದಾರೆ.
ಇನ್ನಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಅಳಿದುಳಿದ ಅವಶೇಷಗಳನ್ನು ತೆಗೆದು ಸುಸಜ್ಜಿತ ಕಾಲು ಸೇತುವೆ ನಿರ್ಮಿಸಿ ತುಂಗರ ಬೈಲು ಭಾಗದ ನಿವಾಸಿಗಳ ಸುಗಮ ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.