Advertisement

ಅನುದಾನವಿಲ್ಲದೆ ನನೆಗುದಿಗೆ ಬಿದ್ದ ರಸ್ತೆ ಅಭಿವೃದ್ಧಿ

03:43 PM Dec 03, 2019 | Suhan S |

ಬಂಗಾರಪೇಟೆ: ತಾಲೂಕಿನ ಕೆಲವು ಗ್ರಾಮಗಳ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ. 10 ವರ್ಷಗಳ ಹಿಂದೆ ಡಾಂಬರುಕಂಡಿದ್ದ ಹಳ್ಳಿಗಳ ಸಂಪರ್ಕ ರಸ್ತೆಗಳು ಈಗ ಗುಂಡಿ ಬಿದ್ದು, ಡಾಂಬರು ಕಿತ್ತುಹೋಗಿ ಜಲ್ಲಿ ರಸ್ತೆಗಳಾಗಿವೆ. ಇತ್ತೀಚಿಗೆ ಬಿದ್ದ ಮಳೆಯಿಂದ ಗುಂಡಿಯಲ್ಲಿ ನೀರು ಶೇಖರಣೆಯಾಗಿ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಮತ್ತಷ್ಟು ಹದಗೆಟ್ಟು ಸವಾರರ ಜೀವಕ್ಕೆ ಸಂಚಕಾರ ತರುವಂತಿವೆ.

Advertisement

ಇದಕ್ಕೆ ತಾಲೂಕಿನ ಗಾಜಗಸಂಗನಹಳ್ಳಿ ರಸ್ತೆ ಜೀವಂತ ಸಾಕ್ಷಿಯಾಗಿದೆ. ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಅನುದಾನ ಮಂಜೂರು ಆಗಿತ್ತು. ಅದರಲ್ಲಿ ಈ ರಸ್ತೆ ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಹಿಂದೆ ಸರ್ಕಾರ ಬಿಡುಗಡೆಮಾಡಿದ್ದ 10 ಕೋಟಿ ರೂ. ಅನುದಾನ ವಾಪಸ್‌ ಪಡೆದಿರುವುದರಿಂದರಸ್ತೆ ದುರಸ್ತಿ ಕಾಮಗಾರಿ ನನೆಗುದಿಗೆ ಬಿದ್ದದಂತಾಗಿದೆ.

ತಾಂತ್ರಿಕ ಸಮಸ್ಯೆ: ತಾಲೂಕು ಕೇಂದ್ರ ಸ್ಥಾನದಿಂದ ಇತಿಹಾಸ ಪ್ರಸಿದ್ಧ ಹೈದರಾಲಿ ಹುಟ್ಟಿದ ಬೂದಿಕೋಟೆ ಮಾರ್ಗದ ಮಾಲೂರು ತಾಲೂಕು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಟೇಕಲ್‌ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು 10 ವರ್ಷಗಳಿಂದ ಅಭಿವೃದ್ಧಿ ಪಡಿಸದ ಕಾರಣ ಹದಗೆಟ್ಟಿದೆ. ಸಂಬಂಧಪಟ್ಟ ಇಲಾಖೆಗಳುಅಭಿವೃದ್ಧಿಗೆ ಕ್ರಮಕೈಗೊಂಡರೂ ಪದೇಪದೆ ತಾಂತ್ರಿಕ ಸಮಸ್ಯೆಗಳು ಸಂಭವಿಸುತ್ತಲೇ ಇವೆ.

ಓಡಾಡಲು ಕಷ್ಟ: ಗಾಜಗಸಂಗನಹಳ್ಳಿ ರಸ್ತೆಯು ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ ತಾಂತ್ರಿಕ ಉಪವಿಭಾಗಕ್ಕೆ ಸೇರಿದೆ. ಮಳೆ ಬಂದರೆ ಈ ರಸ್ತೆಯಲ್ಲಿ ನೀರು ತುಂಬಿಕೊಂಡು, ಗುಂಡಿಯಾವುದು, ರಸ್ತೆಯಾವುದು ಗೊತ್ತಾಗುವುದಿಲ್ಲ. ಜನಸಾಮಾನ್ಯರು, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಕಷ್ಟಪಡುತ್ತಾರೆ.

ಭಾರೀ ವಾಹನಗಳ ಸಂಚಾರವೂ ಕಷ್ಟ: ಗಾಜಗ ಗ್ರಾಮದಿಂದ ದೆಬ್ಬನಹಳ್ಳಿಜುಂಜನಹಳ್ಳಿ ಮಾರ್ಗದ ಮೂಲಕಸಂಗನಹಳ್ಳಿ ಹೋಗುವ ರಸ್ತೆ ಉದ್ದಕ್ಕೂ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆ ನೀರು ಬಂದು ರಸ್ತೆಯಲ್ಲಿಯೇ ನೀರು ನಿಂತಿದೆ. ರಸ್ತೆಯ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಅಗಲವಾಗಿದ್ದ ರಸ್ತೆ ಸಣ್ಣದಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳು ಬಿಟ್ಟರೆ ಉಳಿದಂತೆ ಯಾವುದೇ ದೊಡ್ಡ ವಾಹನಗಳು ಸಂಚರಿಸಲು ತೀವ್ರ ಕಷ್ಟಕವಾಗಿವೆ. ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಮಟ್ಟಿಗೆ ಹದಗೆಟ್ಟಿರುವ ಈ ರಸ್ತೆಯನ್ನು ಹಿಂದಿಯೇ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ದುರಸ್ತಿ ಮಾಡಬೇಕಿತ್ತು.

Advertisement

ಮಳೆಗಾಲ ಪ್ರಾರಂಭಗೊಂಡರೆ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳು ಓಡಾಡಲು ಕಷ್ಟವೇ ಆಗಿದೆ. ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ಈ ಭಾಗದ ಸಾರ್ವಜನಿಕರು ಯಾರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕೋ ಎಂಬುದು ಗೊತ್ತಾಗದೇ, ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

 

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next