ಸುಮಾ, ಗಡಿಬಿಡಿಯಿಂದ ಆಗಲೇ ಪಾರ್ಕ್‌ನಲ್ಲಿ ವಾಕಿಂಗ್ ಶುರು ಮಾಡಿದ್ದ ಸ್ನೇಹಿತೆ ರೇಖಾಗೆ ಜೊತೆಯಾದರು. “ನೀವು ಇಷ್ಟುದಿನ ಕಚೇರಿಗೂ ಸಮಯಕ್ಕೆ ಮುಂಚಿತವಾಗೇ ಹೋಗ್ತಿದ್ರಿ ಅನ್ಸುತ್ತೆ. ಅದಕ್ಕೆ ಈಗಲೂ, ಸಮಯಕ್ಕೆ ಸರಿಯಾಗಿ ವಾಕಿಂಗ್ ಶುರು ಮಾಡಿರ್ತೀರಾ. ನಾನು 5 ಗಂಟೆಗೆ ಅಂದ್ರೆ ಐದೂ ಕಾಲಿಗೇ ಬರೋದು’ ಎಂದು ಸುಮಾ ನಗುತ್ತಾ ಹೆಜ್ಜೆ ಹಾಕತೊಡಗಿದರು.
“ನಿಜಾ ರೀ… ಸುಮಾ, ಕಚೇರಿಗೆ ಹೋಗ್ತಾ ಇದ್ದಾಗಲೇ ಲೈಫು ಚೆನ್ನಾಗಿತ್ತು. ಬೇಗ ಮನೆ ಕೆಲಸಾನೂ ಮುಗೀತಿತ್ತು. ಹೊರಗಡೆ ಹೋಗೋದ್ರಿಂದ ದಿನವಿಡೀ ಉತ್ಸಾಹಾನೂ ಇರ್ತಿತ್ತು’ ಎಂದರು ರೇಖಾ ಕೊಂಚ ಬೇಸರದಿಂದ. “ಅಷ್ಟು ಒಳ್ಳೆ ಬ್ಯಾಂಕ್ ಕೆಲಸದಿಂದ ನೀವು ಇಷ್ಟು ಬೇಗ ಏಕೆ ನಿವೃತ್ತಿ ತಗೊಂಡ್ರಿ?’ ಎಂದು ಸುಮಾ ಕೇಳಿದಾಗ, ರೇಖಾ ತನ್ನ ಸ್ವಯಂ ನಿವೃತ್ತಿಯ ಕಾರಣದ ಕತೆ ಹೇಳತೊಡಗಿದರು.
“ನಮ್ಮೆಜಮಾನ್ರು ಕಳೆದ ವರ್ಷ ವಿಆರ್‌ಎಸ್ ತಗೊಂಡ್ರು. ಇನ್ನೂ 6 ವರ್ಷ ಸೇವೆ ಇರುವಾಗಲೇ ಸ್ವಯಂ ಇಚ್ಛೆಯಿಂದ ನಿವೃತ್ತಿ ಪಡೆದು ಹಾಯಾಗಿ ಸ್ನೇಹಿತರು, ಇಂಟರ್ನೆಟ್, ಸೋಷಿಯಲ್ ಮೀಡಿಯಾ, ಪ್ರವಾಸ ಮತ್ತೆ ಮಗನ ಭೇಟಿ ಅಂತ ವಿದೇಶಕ್ಕೂ ಹೋಗಿ ಬಂದರು. ಉದ್ಯೋಗದಲ್ಲಿದ್ದಾಗ ಅವರಿಗೆ ಇದನ್ನೆಲ್ಲ ಮಾಡಲು ಸಮಯವೇ ಸಿಗ್ತಾ ಇರಲಿಲ್ಲ. ಅವರೇ ನನಗೆ, “ನಿನಗೆ ಇನ್ನೂ 10 ವರ್ಷ ಸರ್ವಿಸ್ ಇದೆ. ಅಷ್ಟು ವರ್ಷ ಕೆಲಸ ಮಾಡಿ ಯಾಕೆ ಕಷ್ಟಪಡ್ತೀಯಾ? ನಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿದೆ. ನೀನೂ ಸ್ವಯಂ ನಿವೃತ್ತಿ ಪಡೆದು ನನ್ನ ಹಾಗೆ ಹಾಯಾಗಿರು’ ಎಂದು ಯಜಮಾನರು ಸಲಹೆ ಕೊಟ್ಟರು. 26 ವರ್ಷಗಳಿಂದ ಬ್ಯಾಂಕಿನ ಉದ್ಯೋಗದಿಂದ ಬೇಸತ್ತಿದ್ದ ನನಗೆ ಯಜಮಾನರ ಮಾತು ಸರಿ ಅನ್ನಿಸಿತು. ಅದೂ ಅಲ್ಲದೆ ಅವರು ರಿಟೈರ್ ಆದ್ಮೇಲೆ ಆರಾಮಾಗಿ ಕಾಲ ಕಳೆಯುತ್ತಿದ್ದುದನ್ನು ನೋಡಿ ನಾನೂ ನಿವೃತ್ತಿ ಪಡೆದೆ. ಆಮೇಲಷ್ಟೇ ಗೊತ್ತಾಗಿದ್ದು: ನಿವೃತ್ತಿಯ ನಂತರವೂ ಹೆಂಗಸರಿಗೆ ಕೆಲಸ ಮಾಡೋದು ತಪ್ಪೋದಿಲ್ಲ ಅಂತ’. ಆ ಮಾತು ಕೇಳಿ ಸುಮಾ, “ಯಾಕ್ರೀ ಹಾಗಂತೀರಾ? ನೀವೀಗ ಆರಾಮಾಗಿ ಇಲ್ವಾ?’ ಎಂದು ಕೇಳಿದರು.
“ನಿವೃತ್ತಿಯ ನಂತರ ಅವರ ಲೈಫೇನೋ ಚೆನ್ನಾಗೇ ನಡೀತಿದೆ. ನನ್ನದೇನು ಕೇಳ್ತೀರ? ನನಗೆ ಮೊದಲಿಗಿಂತಲೂ ಎರಡು ಪಟ್ಟು ಕೆಲಸ. ಅವರೂ ಮನೇಲಿ ಇರ್ತಾರೆ, ದಿನಕ್ಕೆ ಮೂರು, ನಾಲ್ಕು ಸಲ “ಟೀ ಮಾಡು, ತಿಂಡಿ ಮಾಡು’ ಅಂತಾರೆ. ನಾನು ಕೆಲಸಕ್ಕೆ ಹೋಗುವಾಗ ಅವರೇ ಟೀ ಮಾಡ್ಕೊಳ್ತಾ ಇದ್ದರು. ಚಿಕ್ಕಪುಟ್ಟ ಕೆಲಸಾನೂ ಅವರೇ ಮಾಡೋದು. ಆದ್ರೆ ಈಗ, “ನೀನು ಹೇಗಿದ್ರೂ ಮನೇಲಿ ಇರ್ತಿಯಾ ಅಲ್ವಾ’ ಅಂತ ತಮ್ಮ ವೈಯಕ್ತಿಕ ಕೆಲಸಾನೂ ನನಗೇ ಹೇಳ್ತಾರೆ. ಮೊದಲೆಲ್ಲ ದಿನದ ಬಹುಪಾಲು ಸಮಯ ಬ್ಯಾಂಕ್‌ನಲ್ಲೇ ಕಳೆದುಹೋಗ್ತಿತ್ತು. ಹಾಗಾಗಿ, ಮನೆಕೆಲಸದವಳು ಹೇಗೆ ಕ್ಲೀನ್ ಮಾಡಿದ್ರೂ ಮನೆ ಸ್ವತ್ಛವಾಗಿಯೇ ಕಾಣಾ¤ ಇತ್ತು. ಆದರೆ, ಈಗೀಗ ಅವಳ ಕೆಲಸದಲ್ಲಿ ಬರೀ ಹುಳುಕೇ ಕಾಣಿಸುತ್ತೆ. ಇಲ್ಲಿ ಕಸ ಗುಡಿಸಿಲ್ಲ. ಅಲ್ಲಿ ಧೂಳು ಹಾಗೇ ಇದೆ ಅಂತ ಅವಳು ಹೋದ ನಂತರ ಪೊರಕೆ ಕೈಗೆ ತಗೋತೀನಿ. ಈ ಸ್ವತ್ಛತೆ ಅನ್ನೋದು ಒಂದು ರೋಗ ಕಣ್ರೀ’ ಎಂದು ರೇಖಾ, ನಿವೃತ್ತಿಯ ನಂತರ ಬದಲಾದ ಜೀವನಶೈಲಿಯನ್ನು ಬಿಚ್ಚಿಟ್ಟರು. “ನಿಮಗೆ ಈ ಸಮಸ್ಯೆಗಳೆಲ್ಲ ಇತ್ತೀಚೆಗೆ ಶುರುವಾಗಿವೆ. ನಾನು ಮೊದಲಿನಿಂದಲೂ ಗೃಹಿಣಿ. ಕಚೇರಿಗಾದ್ರೆ ರಜಾ ಇರುತ್ತೆ. ಆದರೆ ನಮ್ಮ ಹೊಟ್ಟೆಗೆಲ್ಲಿ ರಜಾ? ನಂದು ನಿತ್ಯವೂ ಇದೇ ಪಾಡು’ ಎಂದು ಸುಮಾ ನಿಟ್ಟುಸಿರಿಟ್ಟರು.
.
.
ಇದು ಬರೀ ರೇಖಾ ಮತ್ತೆ ಸುಮಾಳ ದಿನಚರಿ ಅಲ್ಲ. ಪ್ರತಿ ಮಹಿಳೆಯ ದಿನಚರಿ ಇದು. ಆಕೆ ಗೃಹಿಣಿಯೇ ಇರಬಹುದು ಅಥವಾ ಉದ್ಯೋಗಸ್ಥೆಯಾಗಿರಬಹುದು. ಉದ್ಯೋಗದಿಂದ ಇಂತಿಷ್ಟು ವರ್ಷಕ್ಕೆ ನಿವೃತ್ತಿಯೆಂದು ನಿಗದಿ ಮಾಡಿರುತ್ತಾರೆ. ಪುರುಷರು “ನಿವೃತ್ತಿ ಆಯ್ತಪ್ಪಾ, ನನಗಿನ್ನು ಬಿಡುವು’ ಎಂದು ಘೋಷಿಸಿ, ಆರಾಮಾಗಿ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಉದ್ಯೋಗಸ್ಥ ಮಹಿಳೆಯರಿಗೆ ನಿವೃತ್ತಿ ನಂತರ ಕಚೇರಿಯಿಂದ ಬಿಡುವು ಸಿಗಬಹುದೇ ವಿನಃ ಮನೆಕೆಲಸದಿಂದಲ್ಲ. ಭಾರತೀಯ ಸಮಾಜದಲ್ಲಿ ಹೆಣ್ಣು ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಗಂಡ, ಮುಪ್ಪಿನಲ್ಲಿ ಮಕ್ಕಳ ಬದುಕಿಗೆ ನೆರವಾಗುತ್ತಾ, ತನ್ನ ವಯಸ್ಸಿಗನುಗುಣವಾಗಿ ಕಾರ್ಯೋನ್ಮುಖವಾಗಿ ಎಂದಿಗೂ, ಯಾರಿಗೂ ಹೊರೆಯಾಗದೆ ಎಲ್ಲರಿಗೂ ಆಸರೆಯಾಗಿರುತ್ತಾಳೆ. ಕುಟುಂಬದ ನಿರ್ವಹಣೆಯಲ್ಲಿ ತನ್ನವರ ಏಳಿಗೆಗಾಗಿ ಪ್ರತಿಫಲಾಪೇಕ್ಷೆಯಿಲ್ಲದೆ, ಬಿಡುವಿಲ್ಲದೆ ದುಡಿಯುತ್ತಾಳೆ - ಎಂದಿಗೂ ರಜೆ ತೆಗೆದುಕೊಳ್ಳದೆಯೇ, ನಿವೃತ್ತಿಯನ್ನು ಬಯಸದೆಯೇ.
ಶಿಲ್ಪಾ ಕುಲಕರ್ಣಿ