Advertisement

ಸರಕು ಸಾಗಾಣಿಕೆ ವಾಹನಕ್ಕಿಲ್ಲ ನಿರ್ಬಂಧ

04:44 PM Apr 01, 2020 | Suhan S |

ಹಾವೇರಿ: ದಿನಸಿ, ತರಕಾರಿ ಸೇರಿದಂತೆ ಯಾವುದೇ ತರಹದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರ ಸಾಗಾಣಿಕೆಗೆ ಮಾತ್ರ ನಿರ್ಬಂಧವಿದೆ.

Advertisement

ದಿನಸಿ, ತರಕಾರಿಗಳನ್ನು ಹೊರರಾಜ್ಯ, ಹೊರ ಜಿಲ್ಲೆಯಿಂದ ತರಿಸಿಕೊಳ್ಳಲು ಹಾಗೂ ತೆಗೆದುಕೊಂಡು ಹೋಗಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸ್ಪಷ್ಟಪಡಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಹಾಗೂ ವರ್ತಕಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವರ್ತಕರ ಸಮಸ್ಯೆಯನ್ನು ಆಲಿಸಿದ ಅವರು, ಜಿಲ್ಲೆಯಿಂದ ಹೊರಗಡೆ ಸಾಮಾಗ್ರಿಗಳ ಸಾಗಾಣಿಕೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಹಾಗೂ ಜಿಲ್ಲೆಯ ಒಳಗೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ವಾಹನಗಳಿಗೆ ಆಯಾ ತಾಲೂಕು ತಹಶೀಲ್ದಾರಗಳಿಂದ ಪರವಾನಗಿ ಪಡೆಯುವಂತೆ ಸಲಹೆ ನೀಡಿದರು. ಹೊರ ಜಿಲ್ಲೆಯಿಂದ ಸಾಮಗ್ರಿ ತರಲು ಯಾವುದೇ ನಿರ್ಬಂಧವಿಲ್ಲ. ವರ್ತಕರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಲಾಗುವುದು ಎಂದರು.

ಹೆದ್ದಾರಿಯಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ವಾಹನಗಳು ಸರಾಗವಾಗಿ ಸಾಗಲು ಸರ್ಕಾರ ಅನುಮತಿ ನೀಡಿದೆ. ಕಾರಣ ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಜಿಲ್ಲೆಗೆ ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ತರಸಿಕೊಳ್ಳಬಹುದು. ದಿನಸಿಗಳ ಕೊರತೆಯಾಗದಂತೆ ದಾಸ್ತಾನಿಗೆ ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸುತ್ತದೆ ಎಂದು ವರ್ತಕರಿಗೆ ತಿಳಿಸಿದರು.

ದಿನಸಿ ಮಾರಾಟ ಮಾಡಲು ಜಿಲ್ಲಾಡಳಿತ ಯಾವುದೇ ಸಮಯವನ್ನು ನಿಗದಿಪಡಿಸಿಲ್ಲ.ಜನರಿಗೆ ತೊಂದರೆಯಾಗಂತೆ ದಿನದ 24 ತಾಸು ಅಂಗಡಿಗಳನ್ನು ತೆರೆದು ದಿನಸಿಗಳನ್ನು ಮಾರಾಟ ಮಾಡಬಹುದು. ಮನೆ ಬಾಗಿಲಿಗೆ ಸಾಮಗ್ರಿ ತಲುಪಿಸಲು ಜಿಲ್ಲಾಡಳಿತ ಪ್ರೋತ್ಸಾಹ ನೀಡುತ್ತದೆ. ಗ್ರಾಹಕರು ದೂರವಾಣಿ ಕರೆ ಮಾಡಿದರೆ ಅವರ ಮನೆಗೆ ದಿನಬಳಕೆ ಸಾಮಗ್ರಿ ತಲುಪಿಸುವ ವ್ಯವಸ್ಥೆ ಕೈಗೊಂಡರೆ ಒಳ್ಳೆಯದು. ಆದರೆ, ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಪ್ರತಿ ಕಿರಾಣಿ ಅಂಗಡಿಯ ಮುಂದೆ ಸಾಮಗ್ರಿಗಳ ದರಪಟ್ಟಿಯನ್ನು ಪ್ರಕಟಿಸಬೇಕು ಎಂದರು.

Advertisement

ತರಕಾರಿ ಮಾರಾಟ, ಎಲೆ, ಶುಂಠಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಹೊರ ಜಿಲ್ಲೆಗೆ ಸಾಗಾಣಿಕೆ ಮಾಡುವುದಾದರೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು. ಕೃಷಿ ಚಟುವಟಿಕೆಗೆ ಯಾವುದೇ ಅಡೆತಡೆ ಬೇಡ. ಆಹಾರ ಧಾನ್ಯಗಳಿಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಿ ಸ್ಥಳೀಯವಾಗಿ ತಾಂತ್ರಿಕ ಸಮಸ್ಯೆಗಳನ್ನು ತಹಶೀಲ್ದಾರ್‌ ಮಟ್ಟದಲ್ಲಿ ಬಗೆಹರಿಸಿ ಜನರಿಗೆ ಆಹಾರ, ತರಕಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಿ ಎಂದು ಸಲಹೆ ನೀಡಿದರು.

ಪೆಟ್ರೋಲ್‌ ಬಂಕ್‌ ಮಾಲೀಕರು, ವರ್ತಕರು, ಸೇಲ್ಸ್‌ ಮ್ಯಾನ್‌ಗಳಿಗೆ, ಹಮಾಲರಿಗೆ ಪಾಸ್‌ ವಿತರಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ವ್ಯವಸ್ಥಿತವಾಗಿ ವಿತರಣೆಯಾಗಬೇಕು. ನ್ಯಾಯಬೆಲೆ ಅಂಗಡಿಗಳಿಂದ ಮನೆಗೆ ಎರಡು ತಿಂಗಳ ಪಡಿತರ ಸಾಗಿಸಲು ಅನುಕೂಲವಾಗುವಂತೆ ಆಟೋ ಇತರ ವಾಹನಗಳಿಗೆ ಓಡಾಡಲು ಅನುಮತಿ ನೀಡಬೇಕು. ಪಾಸ್‌ಗಳನ್ನು ವಿತರಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ| ದಿಲೀಷ್‌ ಶಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಿ, ವೀರೇಂದ್ರ ಕುಂದಗೋಳ, ತಹಶೀಲ್ದಾರ್‌ ಶಂಕರ ಜಿ.ಎಸ್‌. ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next