ಚಳ್ಳಕೆರೆ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್, ಆಟೋ, ಖಾಸಗಿ ವಾಹನ ಸಂಚಾರ ಎಂದಿನಂತಿತ್ತು. ನಗರದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಕೆಲವು ಅಂಗಡಿಗಳು ಮಾತ್ರ ಮುಚ್ಚಿದ್ದು, ಬಹುತೇಕ ಅಂಗಡಿಗಳು ತಮ್ಮ ವಹಿವಾಟು ಮುಂದುವರೆದ್ದವು.
ಕರ್ನಾಟಕ ಬಂದ್‌ಗೆ ಸಹಕಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ಅಧ್ಯಕ್ಷ ಟಿ.ಜೆ. ವೆಂಕಟೇಶ್ ಆಟೋದಲ್ಲಿ ಪ್ರಚಾರ ಮಾಡಿದ್ದರು. ಹೀಗಾಗಿ ಕೆಲ ಗಂಟೆಗಳು ಮಾತ್ರ ಅಂಗಡಿ ಹಾಗೂ ಹೋಟೆಲ್‌ಗಳು ಮುಚ್ಚಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಟಿ.ಜೆ. ವೆಂಕಟೇಶ್, ನಮ್ಮ ಮನವಿಗೆ ಚಳ್ಳಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬೆಂಬಲ ನೀಡಿದ್ದಾರೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪಿ. ಮಂಜುನಾಥ, ಕೂಡಲೇ ಮರಾಠ ಅಭಿವೃದ್ಧಿ ನಿಗಮ ಆದೇಶವನ್ನು ರದ್ದುಪಡಿಸಬೇಕು. ರಾಜ್ಯದ ಬಹುತೇಕ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ಉದಾಸೀನ ಮಾಡಲಾಗುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಯುವ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎನ್. ಆದರ್ಶ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಯಾವುದೇ ಚರ್ಚೆ ಇಲ್ಲದೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆಆದೇಶ ಹೊರಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್ ನೇತೃದಲ್ಲಿ ಪಿಎಸ್‌ಐ ಟಿ.ಆರ್. ರಾಘವೇಂದ್ರ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.