ನವದೆಹಲಿ: ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಅಶಿಸ್ತು, ಉದ್ಧಟತನ ತೋರಿಸಿದ್ದ 12 ಮಂದಿ ರಾಜ್ಯಸಭಾ ಸದಸ್ಯರನ್ನು ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಲ್ಲ ಎಂದು ರಾಜ್ಯ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರ ನಡೆಯನ್ನು ಖಂಡಿಸಿ ವಿಪಕ್ಷಗಳು ಮಂಗಳವಾರ (ನವೆಂಬರ್ 30) ಸಭಾತ್ಯಾಗ ನಡೆಸಿವೆ.
ಇದನ್ನೂ ಓದಿ:ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು
ಅಮಾನತುಗೊಂಡಿರುವ ಸಂಸದರು ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಹೀಗಾಗಿ ನಾನು ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂಬ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದರು.
ಆಯ್ದ (ಕಾಂಗ್ರೆಸ್ ನ ಆರು ಸಂಸದರು ಸೇರಿ) ಸಂಸದರನ್ನು ಅಮಾನತುಗೊಳಿಸಿರುವುದು ಕಾಯ್ದೆಗೆ ವಿರುದ್ಧವಾಗಿದೆ. ಈ ನಿಟ್ಟಿನಲ್ಲಿ 12 ಮಂದಿ ಸಂಸದರ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂದು ನಾನು ಮನವಿ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಖರ್ಗೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಭಾಧ್ಯಕ್ಷ ನಾಯ್ಡು ಅವರು, ಇದೊಂದು ಸರಿಯಾದ ಕ್ರಮವಲ್ಲ. ನೀವು ಸದನದ ಕಲಾಪದಲ್ಲಿ ಕೋಲಾಹಲ ಎಬ್ಬಿಸಿ, ಈಗ ನೀವು ನನಗೆ ಪಾಠ ಹೇಳುತ್ತೀರಾ? ನಾನು ಯಾವುದೇ ಕಾರಣಕ್ಕೂ ಅಮಾನತು ಆದೇಶ ವಾಪಸ್ ಪಡೆಯಲ್ಲ ಎಂದು ತಿಳಿಸಿದಾಗ, ಆಕ್ರೋಶಗೊಂಡ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಸಂಸದರು ಸಭಾತ್ಯಾಗ ನಡೆಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಸದಸ್ಯರು ಕಲಾಪದಿಂದ ಹೊರನಡೆದಿದ್ದರು. ಈ ಗದ್ದಲದ ಪರಿಣಾಮ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿದ ಪರಿಣಾಮ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.