Advertisement

ಕೆಂಪು ಪಟ್ಟಿ ಇಲ್ಲ; ಕೆಂಪು ಹಾಸೇ ಎಲ್ಲ

06:00 AM Jan 24, 2018 | Harsha Rao |

ದಾವೋಸ್‌/ನವದೆಹಲಿ: ಭಾರತದಲ್ಲಿ ಈಗ ಕೆಂಪು ಪಟ್ಟಿಯ ಹಾವಳಿ ಇಲ್ಲ. ಬದಲಾಗಿ ಕೆಂಪು ಹಾಸಿನ ಸ್ವಾಗತವಿದೆ. ಬನ್ನಿ ನಮ್ಮ ದೇಶಕ್ಕೆ ಬಂದು ಬಂಡವಾಳ ಹೂಡಿಕೆ ಮಾಡಿ. ಉತ್ತಮ ಮತ್ತು ಕೆಟ್ಟ ಭಯೋತ್ಪಾದನೆ ಎಂಬ ಕೃತಕ ವಿಭಜನೆ ಜಗತ್ತಿಗೇ ಹಾಳು. ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿರುವುದೂ ಉತ್ತಮ ಬೆಳವಣಿಗೆ ಅಲ್ಲ.’

Advertisement

– ಹೀಗೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ. 1997ರಲ್ಲಿ ಅಂದಿನ ಪ್ರಧಾನಿ, ಕರ್ನಾಟಕದ ಎಚ್‌.ಡಿ.ದೇವೇಗೌಡರು ವಿಶ್ವ ಆರ್ಥಿಕ ಶೃಂಗ (ಡಬ್ಲೂಇಎಫ್)ದಲ್ಲಿ ಭಾಷಣ ಮಾಡಿ ಇಪ್ಪತ್ತು ವರ್ಷಗಳ ಬಳಿಕ ದೇಶದ ಪ್ರಧಾನಿ ಅಲ್ಲಿ ಮಾತನಾಡಿದ್ದಾರೆ.

1997ರಲ್ಲಿ ಭಾರತದ ಜಿಡಿಪಿ ಮೌಲ್ಯ 25,510 ಶತಕೋಟಿ (400 ಬಿಲಿಯನ್‌ ಅಮೆರಿಕನ್‌ ಡಾಲರ್‌ ) ಇತ್ತು. ಈಗ ಅದರ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹವಾಮಾನ ಬದಲಾವಣೆ, ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂಬ ಕೃತಕ ವರ್ಗೀಕರಣ ನಿಜಕ್ಕೂ ಆತಂಕಕಾರಿ. ಭಯೋತ್ಪಾದನೆ ವಿರುದ್ಧ ಭಾರತ ಹೊಂದಿರುವ ನಿಲುವು ಜಗತ್ತಿಗೇ ಗೊತ್ತಿರುವಂಥದ್ದು ಎಂದಿದ್ದಾರೆ.

ಉನ್ನತ ಅಧ್ಯಯನ ಪಡೆದ ಯುವಕರೇ ಮೂಲಭೂತವಾದದ (ರಾಡಿಕಲೈಸೇಷನ್‌) ಕಡೆಗೆ ಆಕರ್ಷಿತರಾಗುತ್ತಿರುವುದೇ ಕಳವಳಕಾರಿ. ಅಗತ್ಯವಾಗಿರುವ ಸ್ವಾತಂತ್ರ್ಯವನ್ನು ಸೃಷ್ಟಿಸಬೇಕು. ಅಲ್ಲಿ ಪರಸ್ಪರ ಸಹಕಾರಕ್ಕೆ ಆದ್ಯತೆ ನೀಡಿ, ವಿಭಜನೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಡಬ್ಲೂéಇಎಫ್ ಹೊಂದಿರುವ “ಭಿನ್ನ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಭವಿಷ್ಯ’ ಎಂಬ ಧ್ಯೇಯವಾಕ್ಯಕ್ಕೆ ಭಾರತ ಹೊಂದಿರುವ “ವಸುದೈವ ಕುಟುಂಬಕಂ’ (ವಿಶ್ವವೇ ಕುಟುಂಬ) ಮಾತು ಸಮಾನವಾಗಿ ಹೊಂದುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಗತ್ಯವೂ ಆಗಿದೆ ಎಂದರು ಪ್ರಧಾನಿ ಮೋದಿ.

3 ಲಕ್ಷ ಕೋಟಿ ಆರ್ಥಿಕತೆ: 2025ರ ವೇಳೆಗೆ ಭಾರತದ ಅರ್ಥವ್ಯವಸ್ಥೆ ಮೂರು ಲಕ್ಷ ಕೋಟಿ ರೂ (5 ಟ್ರಿಲಿಯನ್‌ ಡಾಲರ್‌)ಗೆ ಏರಿಕೆಯಾಗಲಿದೆ. ಭಾರತದಲ್ಲಿ ಹಳೆಯದಾಗಿರುವ 1,400ಕ್ಕೂ ಹೆಚ್ಚು ಕಾನೂನುಗಳನ್ನು ತೆಗೆದು ಹಾಕಲಾಗಿದೆ. “ಕೆಂಪು ಪಟ್ಟಿಯ ಹಾವಳಿ ಕಡಿಮೆಯಾಗಿ, ಹೂಡಿಕೆದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡುವ ವ್ಯವಸ್ಥೆ ಸೃಷ್ಟಿಯಾಗಿದೆ’ ಎಂದಿದ್ದಾರೆ ಮೋದಿ. ಲೈಸನ್ಸ್‌ ರಾಜ್‌ ವ್ಯವಸ್ಥೆಗೆ ಇತಿಶ್ರೀ ಹೇಳುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ ಎಂದರು. “ಭಾರತದಲ್ಲಿ ಹೂಡಿಕೆ ಮಾಡುವುದು, ಪ್ರವಾಸ ಮಾಡುವುದು ಮತ್ತು ಉತ್ಪಾದನೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈಗ ಸುಲಭ. ಅದರ ಸದುಪಯೋಗ ಮಾಡಿ’ ಎಂದು ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.

Advertisement

ಬದಲಿ ಶಕ್ತಿ ವ್ಯವಸ್ಥೆ:  2022ರ ವೇಳೆ ಭಾರತ 175 ಗಿಗಾವ್ಯಾಟ್‌ಗಳಷ್ಟು ಬದಲಿ ಇಂಧನ ಉತ್ಪಾದಿಸುವ ಗುರಿ ಹೊಂದಿದೆ. ಈ ಪೈಕಿ ಮೂರನೇ ಒಂದರಷ್ಟು ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಬದಲಾಗಿದೆ ಭಾರತ: “ಸುಧಾರಣೆ’ (ರಿಫಾರ್ಮ್), ಸಾಧನೆ (ಪರ್ಫಾಮ್‌), ಬದಲಾವಣೆ (ಟ್ರಾನ್ಸ್‌ರ್ಮ್) ಎನ್ನುವುದು ತಮ್ಮ ನೇತೃತ್ವದ ಸರ್ಕಾರದ ಆದ್ಯತೆಯ ಮಂತ್ರ. ದೇಶದಲ್ಲಿ ಬಂಡವಾಳ ಹೂಡಿಕೆಗೆ ಇದುವೇ ಮಂತ್ರವಾಗಿದೆ ಎಂದು ಅವರು ಉದ್ಘೋಷಿಸಿದ್ದಾರೆ. ಜನ ಧನ ಯೋಜನೆ ಜಾರಿಗೊಳಿಸುವುದರ ಮೂಲಕ ಎಲ್ಲ ದೇಶವಾಸಿಗಳನ್ನು ಅರ್ಥ ವ್ಯವಸ್ಥೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ನಗದು ವ್ಯವಹಾರದ ಬದಲು ಡಿಜಿಟಲ್‌ ಮಾಧ್ಯಮದ ಮೂಲಕ ವಹಿವಾಟಿಗೆ ಉತ್ತೇಜನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ.

ಹೆಮ್ಮೆಯಿದೆ: ಭಾರತಕ್ಕೆ ತಾನು ಹೊಂದಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ವಿವಿಧತೆಯಲ್ಲಿ ಏಕತೆ ಬಗ್ಗೆ ಹೆಮ್ಮೆ ಇದೆ. ಅದರಿಂದಾಗಿ ಜಾಗತಿಕ ಶಾಂತಿ ಮತ್ತು ಏಕತೆಗೆ ಆದ್ಯತೆಯ ಕೊಡುಗೆ ನೀಡಿದೆ ಎಂದಿದ್ದಾರೆ ಪ್ರಧಾನಿ. ಪರಿಸರ ಸಂರಕ್ಷಣೆಯೇ ಆದ್ಯತೆಯಾಗಬೇಕು. ಇಲ್ಲದಿದ್ದರೆ ಅದರಿಂದ ಉಂಟಾಗುವ ಅಪಾಯಕ್ಕೆ ಎಲ್ಲರೂ ಬೆಲೆ ತೆರಬೇಕಾದೀತು ಎಂದೂ ಅವರು ಎಚ್ಚರಿಸಿದ್ದಾರೆ.

ಟ್ವೀಟ್‌, ಅಮೆಜಾನ್‌, ಬಿನ್‌ ಲಾಡೆನ್‌, ಹ್ಯಾರಿ ಪಾಟರ್‌…
ದಶಕಗಳ ಅವಧಿಯಲ್ಲಿ ತಾಂತ್ರಿಕತೆ ಬದಲಾಗಿದೆ ಎನ್ನುವುದನ್ನು ಪ್ರಧಾನಿ ಮೋದಿ ವಿಶ್ಲೇಷಣಾತ್ಮಕವಾಗಿ ಮತ್ತು ಆಕರ್ಷಕವಾಗಿ ವಿವರಿಸಿದರು. 1997ಕ್ಕೂ ಮುನ್ನ ಟ್ವೀಟ್‌ ಮಾಡುವುದು ಎಂದರೆ ಹಕ್ಕಿಗಳಿಗೆ ಮಾತ್ರ ಎಂದು ಭಾವಿಸಲಾಗಿತ್ತು. ಇದೀಗ ತಾಂತ್ರಿಕತೆಯಿಂದಾಗಿ ನಾವು ನೀವೆಲ್ಲರೂ ಟ್ವೀಟ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಕುತೂಹಲಕಾರಿ ಅಂಶವೆಂದರೆ ಬಿನ್‌ ಲಾಡೆನ್‌, ಹ್ಯಾರಿ ಪಾಟರ್‌ ಹೆಸರೂ ನಮಗೆ ಗೊತ್ತಿರಲಿಲ್ಲ. ಅಮೆಜಾನ್‌ ಅಂದರೆ ಕಾಡುಗಳು ಎಂಬ ತಿಳಿವಳಿಕೆ ಇತ್ತು. 1997ರ ಬಳಿಕ ತಾಂತ್ರಿಕತೆ ಮತ್ತು ತಿಳಿವಳಿಕೆಯಲ್ಲಿ ಬದಲಾಗಿದೆ. ವಿಶ್ವದಲ್ಲೀಗ ಮಾಹಿತಿ (ಡೇಟಾ) ಕಣಜವೇ ಇದೆ. ಅದರ ನಿಯಂತ್ರಣವೇ ಪ್ರಮುಖವಾಗಿದೆ ಎಂದಿದ್ದಾರೆ. ಸೈಬರ್‌ಯುಗದಲ್ಲಿ ಗೂಗಲ್‌ ಹೆಸರೇ ಇರಲಿಲ್ಲ. ಚೆಸ್‌ ಆಟಗಾರರಿಗೆ ಕಂಪ್ಯೂಟರ್‌ ಮೂಲಕ ಅದನ್ನು ಆಡಬಹುದು ಎಂಬ ಭಯವೂ ಇರಲಿಲ್ಲ ಎಂದಿದ್ದಾರೆ. “ಪ್ರಪಂಚ ಬದಲಾಗುತ್ತಿದೆ. ಜನರ ನಡುವೆ ಪರಸ್ಪರ ಸಂಪರ್ಕ ಇರಬೇಕೆಂದು ನಾವು ಬಯಸುವವರೇ ಹೊರತು ವಿಭಜಿಸುವವರಲ್ಲ. ಆದರೆ ವಿಶ್ವದಲ್ಲಿನ ಸವಾಲುಗಳು ಹೆಚ್ಚಾಗಿದೆ ಮತ್ತು ಅದನ್ನು ಎದುರಿಸಲೇಬೇಕಾಗಿದೆ’ ಎಂದರು ಪ್ರಧಾನಿ.

ರಾಹುಲ್‌ ಟೀಕೆ
ದಾವೋಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಶೇ.73ರಷ್ಟು ಮಂದಿಯ ಸಂಪತ್ತು ಕೇವಲ ಶೇ.1ರಷ್ಟು ಮಂದಿಯ ಬಳಿ ಇದೆ ಎಂಬ ವಿಚಾರವನ್ನು ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಬೇಕಾಗಿತ್ತು ಎಂದು ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು “ಸನ್ಮಾನ್ಯ ಪ್ರಧಾನ ಮಂತ್ರಿಯವರೇ ಸ್ವಿಜರ್ಲೆಂಡ್‌ಗೆ ನಿಮಗೆ ಸ್ವಾಗತ. ದೇಶದ ಶೇ.73ರಷ್ಟು ಮಂದಿಯ ಸಂಪತ್ತು ಶೇ.1ರಷ್ಟು ಮಂದಿ ಕೈಯ್ಯಲ್ಲಿ ಏಕೆ ಇದೆ ಎಂಬ ಬಗ್ಗೆ ಸ್ವಿಜರ್ಲೆಂಡ್‌ ಜನರಿಗೆ ತಿಳಿಸಿ. ನಿಮ್ಮ ಅವಗಾಹನೆಗಾಗಿ ಅದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನೂ ಟ್ಯಾಗ್‌ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಸೋಮವಾರವಷ್ಟೇ ಬಿಡುಗಡೆಯಾದ ಆಕ್ಸ್‌ಫಾಮ್‌ ಸರ್ವೇಯಲ್ಲಿ ದೇಶದ ಶೇ.73ರಷ್ಟು ಮಂದಿಯ ಸಂಪತ್ತು ಶೇ.1ರಷ್ಟು ಮಂದಿಯಲ್ಲಿದೆ ಎಂಬ ಅಭಿಪ್ರಾಯ ವ್ಯ$R$¤ವಾಗಿತ್ತು.

ದೇಶದ ಜನರನ್ನು ಶಾಶ್ವತವಾಗಿ ಬಡತನಕ್ಕೆ ನೂಕಿದ ಹೆಗ್ಗಳಿಕೆ ಕಾಂಗ್ರೆಸ್‌ನದ್ದು. ಜನರಲ್ಲಿ ಸಂಪತ್ತು ಸರಿಯಾಗಿ ಹಂಚಿಕೆಯಾಗದೇ ಇರುವುದರಲ್ಲಿ ನಿಮ್ಮ ಕುಟುಂಬದ ಕೊಡುಗೆಯೇ ಹೆಚ್ಚಾಗಿದೆ. ನೆಹರೂ ಕಾಂಗ್ರೆಸ್‌ ಜಾರಿ ಮಾಡಿದ ಆಡಳಿತದಿಂದಲೇ ಹೀಗಾಗಿದೆ. ಮೂರೂವರೆ ವರ್ಷಗಳ ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶ ನೀಡುವ ಪ್ರಯತ್ನ ನಡೆದಿದೆ.
– ಜಿ.ವಿ.ಎಲ್‌.ನರಸಿಂಹ ರಾವ್‌, ಬಿಜೆಪಿ ವಕ್ತಾರ 

Advertisement

Udayavani is now on Telegram. Click here to join our channel and stay updated with the latest news.

Next