ಬಾಗಲಕೋಟೆ: ಕಳೆದ ತಿಂಗಳು ಸುರಿದ ರೋಹಿಣಿ ಮಳೆಗೆ ಹರ್ಷಗೊಂಡಿದ್ದ ರೈತರು, ಬಿತ್ತನೆ ಮಾಡಿದ್ದು, ರೋಹಿಣಿ ಬಳಿಕ ಆರಂಭಗೊಂಡ ಮೃಗಶಿರ ಮಳೆ, ಜಿಲ್ಲೆಯಲ್ಲಿ ಮುಖ ತೋರಿಸಿಲ್ಲ. ಹೀಗಾಗಿ ಬಿತ್ತನೆ ಮಾಡಿದ ಬೆಳೆ, ತೇವಾಂಶ ಕೊರತೆಯಿಂದ ಸರಿಯಾಗಿ ಮೊಳಕೆಯೊಡುತ್ತಿಲ್ಲ ಎಂಬ ಆತಂಕ ರೈತರಲ್ಲಿ ಶುರುವಾಗಿದೆ.
ಹೌದು, ಜಿಲ್ಲೆಯಲ್ಲಿ ರೋಹಿಣಿ ಮಳೆ ಒಂದಷ್ಟು ಉತ್ತಮವಾಗಿಯೇ ಸುರಿದಿತ್ತು. ಸಾಮಾನ್ಯ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ, ರೈತರು ಮುಂದೆ ಉತ್ತಮ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿಯೇ ಹದಗೊಂಡ ಭೂಮಿಗೆ ಮುಂಗಾರು ಬಿತ್ತನೆ ಬೀಜ ಹಾಕಿದ್ದರು. ಆದರೆ, ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆಯ ಸುಳಿವಿಲ್ಲ. ಹೀಗಾಗಿ ಬೀಜ ಸರಿಯಾಗಿ ಮೊಳಕೆಯೊಡದಿಲ್ಲ.
ಜಿಲ್ಲೆಯ ಆರು ತಾಲೂಕು ಪೈಕಿ, 2.65 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಿದ್ದು, ಇದಕ್ಕಾಗಿ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಎಲ್ಲ ರೀತಿಯ ಸಜ್ಜು ಮಾಡಿಕೊಂಡಿತ್ತು. ಆದರೆ, ಮಳೆಯ ಅಭಾವದಿಂದ ಸದ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಅಷ್ಟೊಂದು ಬೇಡಿಕೆ ಬರುತ್ತಿಲ್ಲ. ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದ್ದರಿಂದ, ರೈತರು ತರಾತುರಿಯಿಂದ ಬಿತ್ತನೆ ಕೂಡ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ರೈತರು, ಬೆಳೆ ಮೊಳಕೆಯೊಡೆಯುವುದನ್ನೇ ಕಾಯುತ್ತಿದ್ದಾರೆ.
ಕಳೆದ ಏಪ್ರಿಲ್ 14ರಿಂದ ಮುಂಗಾರು ಮಳೆಗಳು ಆರಂಭಗೊಂಡರೂ ಅಶ್ವಿನಿ, ಭರಣಿ, ಕೃತ್ತಿಕ ಮಳೆ ಬರಲೇ ಇಲ್ಲ. ಮೇ 29ರಂದು ಆರಂಭಗೊಂಡ ರೋಹಿಣಿ ಮಳೆ, ಜಿಲ್ಲೆಯ ಹಲವೆಡೆ ಉತ್ತಮವಾಗಿ ಸುರಿದಿತ್ತು. ಜೂ.8ರಿಂದ ಮೃಗಶಿರ ಮಳೆ ಆರಂಭಗೊಂಡಿದ್ದು, ಬುಧವಾರ ಸಂಜೆ ನಾಲ್ಕು ಹನಿ ಸುರಿದಿದ್ದು ಬಿಟ್ಟರೆ ಈ ವರೆಗೆ ಮೃಗಶಿರ ಮುಖ ತೋರಿಸಿಲ್ಲ. ಹೀಗಾಗಿ ರೋಹಿಣಿ ಮತ್ತು ಮೃಗಶಿರ ನಂಬಿಯೇ ಬಿತ್ತನೆ ಮಾಡಿದ ರೈತರು, ಸದ್ಯ ಆತಂಕ ಎದುರಿಸುತ್ತಿದ್ದಾರೆ.
ಮುಂಗಾರು ಹಂಗಾಮಿಗೆ ಏಕ ದಳಧಾನ್ಯ, ದ್ವಿ ದಳಧಾನ್ಯ, ಎಣ್ಣೆಕಾಳು, ಕಬ್ಬು ಸೇರಿದಂತೆ ಒಟ್ಟು 2,65,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈ ವರೆಗೆ ಒಟ್ಟು 99,647 (ಶೇ.37.60) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.