ಸಂಡೂರು: ತಾಲೂಕಿನಾದ್ಯಂತ ಶೇ.40ರಷ್ಟು ಮಾತ್ರ ಮಳೆಯಾಗಿದ್ದು, ಅದರಿಂದ ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ತಡವಾದರೂ ಶೇಂಗಾ ಬಿತ್ತಲು ರೈತರು ಮುಂದಾಗಿದ್ದಾರೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ತಾಪಂ ಆವರಣದಲ್ಲಿ ತಾಪಂ ಅಧ್ಯಕ್ಷೆ ಫರ್ಜಾನ್ ಗೌಸ್ ಅಜಂ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಬಾರಿ 30 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಕೇವಲ 7,122 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ರಾಜ್ಯ ಸರ್ಕಾರ ನೂತನವಾಗಿ ರೈತಸಿರಿ ಯೋಜನೆಯಡಿ ಸಿರಿಧಾನ್ಯ ಬಿತ್ತನೆಗೆ ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ತಾಲೂಕಿನ ಸಂಡೂರು, ಚೋರುನೂರು ಹೋಬಳಿಗಳಿಂದ 1,000 ಅರ್ಜಿಗಳನ್ನು ರೈತರು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯಿಂದ ಅರ್ಜಿಗಳು ಬಂದಿಲ್ಲ. ಅಂದಾಜು 3 ಸಾವಿರ ಅರ್ಜಿಗಳನ್ನು ರೈತರು ಸಲ್ಲಿಸಿದ್ದಾರೆ ಎಂದರು.
ಕಾರ್ಯಾನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಮಾತನಾಡಿ, ಕೃಷಿ ಹೊಂಡಗಳು ಸರಿಯಾಗಿ ಆಗಿಲ್ಲ. ನರೇಗಾ ಯೋಜನೆಯಡಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಕ್ರಮವಹಿಸಿ, ವಿಮಾ ಯೋಜನೆ ಬಗ್ಗೆ, ಉತ್ತಮ ಬೀಜದ ಬಗ್ಗೆ ರೈತರಿಗೆ ಗ್ರಾಪಂ ಮಟ್ಟದಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಬೇರ್ ಅಚಾರ್ ಅವರು ಶೇ.90ರಷ್ಟು ಸಹಾಯಧನವನ್ನು ಹನಿ ನೀರಾವರಿಗೆ ನೀಡಲಾಗುತ್ತದೆ. ಕೀಟನಾಶಕ, ತೆಂಗಿನ ಗಿಡಗಳ ಸಹಾಯಧನ ನೀಡುವ ಬಗ್ಗೆ ಮಾಹಿತಿ ನೀಡಿದರು.
ಕುಡಿಯುವ ನೀರು ಸರಬರಾಜು ಪೂರೈಕೆಗೆ ತಾಲೂಕಿನಾದ್ಯಂತ ಒಟ್ಟು 43 ಖಾಸಗಿ ಬೋರ್‌ವೆಲ್ಗಳಿಂದ ನೀರನ್ನು ಪಡೆಯಲಾಗುತ್ತಿತ್ತು. ಆದರೆ ಜೂನ್ ತಿಂಗಳ ವರೆಗೆ ಮಾತ್ರ ಇತ್ತು. ಮಳೆಯಾಗದ ಕಾರಣ ಅದನ್ನು ಜುಲೈ ತಿಂಗಳಿಗೆ ವಿಸ್ತರಿಸುವಂತೆ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಕುಡಿಯುವ ನೀರು ಸರಬರಾಜು ಅಧಿಕಾರಿ ತಿಳಿಸಿದರು. ಅಲ್ಲದೆ ಶುದ್ಧ ಕುಡಿಯುವ ನೀರನ ಘಟಕಗಳು ನಿಂತಿರುವ ಬಗ್ಗೆ ಕಾರ್ಯಾನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಪ್ರಶ್ನಿಸಿದರು. ಅಲ್ಲದೆ ಅಧ್ಯಕ್ಷೆ ಫರ್ಜಾನ್ ಗೌಸ್ ಅಜಂ ಅವರು ಎಲ್ಲಾ ಇಲಾಖೆಯವರು ಕ್ರಿಯಾ ಯೋಜನೆಗಳ ಮಾಹಿತಿ ಸಲ್ಲಿಸುವಂತೆ ತಿಳಿಸಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಅರ್. ಅಕ್ಕಿ ಮಾತನಾಡಿದರು. ಸಭೆಯಲ್ಲಿ ಅರಣ್ಯ, ಸಮಾಜ ಕಲ್ಯಾಣ ಇಲಾಖೆ, ಜೆಸ್ಕಾಂ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರನಾಯ್ಕ, ಕಾರ್ಯಾನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಉಪಸ್ಥಿತರಿದ್ದರು.