Advertisement

ಮರೆಯಾದ ಮಳೆ. ಬತ್ತಿದ ಭತ್ತದ ಬಯಲು. ಕಂಗಾಲಾದ ಕೃಷಿಕರು

04:16 PM Jul 04, 2019 | keerthan |

ಬದಿಯಡ್ಕ: ತಡವಾಗಿ ಪ್ರಾರಂಭವಾದ ಮುಂಗಾರುಮಳೆ ರೈತರಲ್ಲಿ ಮೂಡಿಸಿದ ನಿರೀಕ್ಷೆ ಇಂದು ಬಿಸಿಲಲ್ಲಿ ಒಣಗಿ ಹೋಗುತ್ತಿದ್ದು ನಿರೀಕ್ಷೆಯ ಕಂಗಳಲ್ಲಿ ನಿರಾಸೆಯ ಕಣ್ಣೀರು ಸುರಿಯುವಂತೆ ಮಾಡಿದೆ. ಮಳೆ ಪ್ರಾರಂಭವಾದಂತೆ ಉತ್ತಮ ಮಳೆ-ಬೆಳೆಯ ನಿರೀಕ್ಷೆಯೊಂದಿಗೆ ಭತ್ತ ಕೃಷಿ ಆರಂಭಿಸಿದ ಕೃಷಿಕರು ನೀರಿಲ್ಲದೆ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಬೆಳೆದು ನಿಂತ ಭತ್ತದ ಹುಲ್ಲುಗಳನ್ನು (ನೇಜಿ) ತೆಗೆದು ಗದ್ದೆಯಲ್ಲಿ ನಾಟಿ ಮಾಡುವ ಸಮಯವಾದರೂ ನೀರಿನ ಕೊರತೆಯಿಂದ ಗದ್ದೆಯ ಉಳುಮೆ ಹಾಗೂ ನಾಟಿ ಕೆಲಸ ಅರ್ಧದಲ್ಲೇ ಉಳಿದಿದ್ದು ಮಳೆ ಪ್ರಾರಂಭವಾದರೆ ಮಾತ್ರ ಇದನ್ನು ಮುಂದುವರಿಸಲು ಸಾಧ್ಯ.

Advertisement

ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆ
ಕಾಸರಗೋಡು ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆಯಾಗಿರುವುದು ಇಲ್ಲಿನ ಕೃಷಿಕರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಜೂನ್‌ ತಿಂಗಳಲ್ಲಿ ಕಡಿಮೆಯಾದರೂ ಮುಂದೆ ಹೆಚ್ಚು ಮಳೆ ಸುರಿಯಬಹುದೆಂಬ ಊಹೆಯಿಂದ ಹಲವೆಡೆಗಳಲ್ಲಿ ಕೃಷಿಕರು ಭತ್ತದ ಕೃಷಿ ಆರಂಭಿಸಿದ್ದಾರೆ. ಆದರೆ ಜುಲೈ ತಿಂಗಳು ಪ್ರಾರಂಭವಾದರೂ ಮಳೆ ಬಿರುಸುಗೊಳ್ಳದಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಸೌಲಭ್ಯ ಇರುವ ಕಡೆಗಳಲ್ಲಿ ಮೋಟಾರು ಮೂಲಕ ನೀರು ಹಾಯಿಸಿ ಗದ್ದೆ ಕೆಲಸ ಮಾಡಲಾಗುತ್ತಿದೆ.

ಬೀಜ ಬಿತ್ತಿ 20-25ದಿನಗಳೊಳಗೆ ನೇಜಿ ತೆಗೆದು ಗದ್ದೆ ಉತ್ತು ಮತ್ತೆ ನಾಟಿ ಮಾಡಬೇಕು. ಇಲ್ಲವಾದಲ್ಲಿ ಫಸಲು ಕಡಿಮೆಯಾಗುತ್ತದೆ. ಆದರೆ ಈ ವರ್ಷ ನೇಜಿ ನೆಡಲು ಅಗತ್ಯವಾದ ಮಳೆ ಸುರಿಯದಿರುವುದು ಕೃಷಿಕರನ್ನು ಸಂಕಷ್ಟಕ್ಕೀಡು ಮಾಡಿದೆ.

ಮೋಟಾರ್‌ ಬಳಸಿ ಗದ್ದೆ ಕೃಷಿ
ನೀರ್ಚಾಲು, ಏಣಿಯರ್ಪು ಸೇರಿದಂತೆ ಜಿಲ್ಲೆಯ ಹಲೆವೆಡೆಗಳಲ್ಲಿ ನೇಜಿ ನೆಡುವ ಕೆಲಸ ಬಹುತೇಕ ಪೂರ್ತಿಗೊಂಡಿದೆ. ಮಳೆ ಇಲ್ಲದಿದ್ದರೂ ಮೋಟಾರ್‌ ಬಳಸಿ ಗದ್ದೆಗೆ ನೀರು ಹಾಯಿಸಿ ಕೃಷಿಕೆಲಸವನ್ನು ಮಾಡಲಾಗಿದೆ. ಆದರೆ ಬೇಳ, ಕೋಡಿಂಗಾರು, ವಿದ್ಯಾಗಿರಿ ಸೇರಿದಂತೆ ಜಿಲ್ಲೆಯಾದ್ಯಂತ ಮೋಟಾರ್‌ ಬಳಸಿ ನೀರು ಹಾಯಿಸಿ ಕೆಲಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸುಡುಬಿಸಿಲ ಬೇಗೆ
ರಾತ್ರಿ ಕಾಲದಲ್ಲಿ ಸುರಿಯುವ ಸಣ್ಣ ಪುಟ್ಟ ಮಳೆಯ ನೀರನ್ನು ಹಗಲಿನ ಸುಡುಬಿಸಿಲು ಸಂಪೂರ್ಣವಾಗಿ ಹೀರಿಬಿಡುತ್ತದೆ. ಆದುದರಿಂದ ಗದ್ದೆಗಳಿಗೆ ನೀರು ಹಾಯಿಸುವುದು ಒಂದು ಸವಾಲಾಗಿದೆ. ಎಷ್ಟೇ ನೀರು ಹಾಯಿಸಿದರೂ ಮಣ್ಣು ಹೀರಿಕೊಳ್ಳುವ ಕಾರಣ ಹೆಚ್ಚು ಹೆಚ್ಚು ನೀರು ಹಾಯಿಸಬೇಕಾದ ಅಗತ್ಯವಿದೆ. ಇದು ಹೆಚ್ಚು ಖರ್ಚಿಗೂ ದಾರಿಯಾಗುತ್ತಿದ್ದು ಈ ಬಾರಿ ಬೆಳೆಯಲ್ಲಿ ಉಂಟಾಗಬಹುದಾದ ಕುಸಿತದ ಭಯವಿರುವ ಕೃಷಿಕರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.

Advertisement

ಮಳೆ ಬಂದರೆ ಭತ್ತ ಬೆಳೆಯುವ
ಜಿಲ್ಲೆಯ ಇನ್ನು ಕೆಲವು ಭಾಗಗಳಲ್ಲಿ ಭತ್ತದ ಕೃಷಿ ಇನ್ನೂ ಆರಂಭವಾಗಿಲ್ಲ. ಉತ್ತಮ ಮಳೆ ಬಂದ ನಂತರವೇ ನೇಜಿ ಹಾಕುವ, ಬಿತ್ತನೆ ಮಾಡುವ ಕೆಲಸ ಆರಂಭಿಸುವುದಾಗಿ ನಿರ್ಧರಿಸಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ಲಾಭಕ್ಕಿಂತ ನಷ್ಟವೇ ಹೆಚ್ಚು ಕಾರ್ಮಿಕರ ಕೊರತೆ, ಸರಕಾರದಿಂದ ಸೂಕ್ತ ಸೌಲಭ್ಯಗಳು ದೊರೆಯದಿರುವುದು, ಹೆಚ್ಚಾಗುತ್ತಿರುವ ಖರ್ಚು ಈಗಾಗಲೇ ಕೃಷಿಕರನ್ನು ಭತ್ತದ ಕೃಷಿಯಿಂದ ಹಿಂಜರಿಯುವಂತೆ ಮಾಡಿದೆ. ಕೆಲವೆಡೆಗಳಲ್ಲಿ ಭತ್ತದ ಗದ್ದೆಯಲ್ಲಿ ತೆಂಗು, ಕೌಂಗು ಬೆಳೆದಿರುವುದು ಕಾಣಬಹುದು.

ಅಕ್ಕಿ ಬೆಲೆ ಹೆಚ್ಚಬಹುದೇ?
ಈಗಾಗಲೇ ಅಕ್ಕಿ ಬೆಲೆ ಗಗನಕ್ಕೇರಿದೆ. ಈ ಬಾರಿಯ ಮಳೆ-ಬೆಳೆಯ ಸಮಸ್ಯೆ ಮುಂದಿನ ದಿನಗಳಲ್ಲಿ ಬಡವರ ಅನ್ನಕ್ಕೆ ಕಲ್ಲು ಹಾಕಲಿದೆಯೇ ಎಂಬ ಸಂದೇಹ ಮೂಡುತ್ತದೆ.

ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next