ತಿಪಟೂರು: ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ರೈತರು ದಿನವೂ ಮೋಡ ಮುಸುಕಿದಂತೆ ಕಾಣುತ್ತಿರುವ ಆಕಾಶದೆಡೆಗೆ ದೃಷ್ಟಿ ನೆಟ್ಟು, ಮಳೆರಾಯ ಯಾವಾಗ ಕೃಪೆ ತೋರುವನೊ ಎಂಬ ಚಿಂತೆಯಲ್ಲೇ ಕಾಲ ಕಳೆಯುವಂತಾಗಿದೆ.
ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ಕಲ್ಪತರು ನಾಡಿನಲ್ಲಿ ನಿರಂತರವಾಗಿ ಬರಗಾಲವೇ ತಾಂಡವ ವಾಡುತ್ತಿದೆ. ಈ ವರ್ಷವೂ ಸಹ ಏಪ್ರಿಲ್ ಅಂತ್ಯ ಅಥವಾ ಮೇಯಿಂದ ಬರಬೇಕಾಗಿದ್ದ ಪೂರ್ವ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಪ್ರಮುಖ ಖುಷ್ಕಿ ಜಮೀನುಗಳಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳಾದ ಹೆಸರು, ಉದ್ದು, ಎಳ್ಳು ತೊಗರಿ ಮತ್ತಿತರೆ ಬೆಳೆಗಳನ್ನು ಬಿತ್ತನೆ ಮಾಡಲಾಗದೆ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅಲ್ಪಸ್ವಲ್ಪ ವಾದರೂ ಪೂರ್ವ ಮುಂಗಾರು ಮಳೆಯಾಗು ತ್ತಿದ್ದರಿಂದ ರೈತರು ಮನೆ ಬಳಕೆಗಲ್ಲದೆ ಮಾರಾಟಕ್ಕೂ ಈ ಬೆಳೆಗಳನ್ನು ಬೆಳೆದು ರಾಗಿ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ ಬೇಸಾಯದ ಖರ್ಚಿಗೆ ಹಣ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ರೈತರ ಪಾಲಿಗೆ ಪೂರ್ವ ಮುಂಗಾರು ಕಹಿಯಾಗಿದ್ದಲ್ಲದೆ ಬರಗಾಲದ ಬೇಗೆಗೆಗೂ ತಳ್ಳಿತು.
ತಡವಾಗುತ್ತಿರುವ ರಾಗಿ ಬಿತ್ತನೆ: ತಾಲೂಕಿನ ಜನ- ಜಾನುವರುಗಳ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು ಜೂನ್ ಕೊನೇ ಅಥವಾ ಜುಲೈ ಮೊದಲ ವಾರದಿಂದಲೇ ಬಿತ್ತನೆ ಪ್ರಾರಂಭಿ ಸಬೇಕಾಗಿತ್ತು. ಆದರೆ ಈವರೆಗೂ ಕಲ್ಪತರು ನಾಡಿಗೆ ಮಳೆಯೇ ಬಾರದಿ ರುವುದು ರೈತರಾದಿಯಾಗಿ ಎಲ್ಲರಲ್ಲೂ ತೀವ್ರ ಆತಂಕ ಉಂಟು ಮಾಡಿದ್ದು, ಈ ವರ್ಷವೂ ರಾಗಿ ಬೆಳೆ ಕೈಕೊಟ್ಟು ಬಿಡುತ್ತೇನೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಜುಲೈ ಮೊದಲ ವಾರದಿಂದ ದೀರ್ಘಾವಧಿ ಉತ್ತಮ ರಾಗಿ ತಳಿ ಬಿತ್ತನೆ ಮಾಡಬೇಕಿತ್ತು. ದೀರ್ಘಾವಧಿ ತಳಿ ರಾಗಿ ಬಿತ್ತನೆಯಿಂದ ಅಧಿಕ ಇಳುವರಿ ಮತ್ತು ಉತ್ತಮ ಮೇವು ದೊರಕುತಿತ್ತು. ರಾಗಿ ಬಿತ್ತಲು ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಮಳೆರಾಯನಿಗೆ ಕಾಯ್ದು ಕುಳಿತಿರುವ ರೈತರು ದಿನನಿತ್ಯವೂ ಮೋಡ ಮುಸುಕಿರುವ ಆಕಾಶದತ್ತ ನೋಡುತ್ತ ಮಳೆರಾಯನ ಕೃಪೆಗೆ ನಿತ್ಯ ಕಾಯುತ್ತಲೇ ಬರದ ಬೇಗೆಯಲ್ಲಿ ಬದುಕು ಸವೆಸುತ್ತಿದ್ದಾರೆ.
ಮೋಡ ಮುಸುಕಿದ ವಾತಾವರಣ: ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲು ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿನಿತ್ಯ ಮೋಡ ಮುಸುಕಿದ ವಾತಾವರಣವಿದ್ದರೂ, ಮಳೆರಾಯ ಮಾತ್ರ ಕೃಪೆ ತೋರುತ್ತಿಲ್ಲ.
ಜೂನ್ ಮೊದಲ ವಾರ ತಾಲೂಕಿನ ಕೆಲ ಭಾಗಗಳಿಗೆ ಮಾತ್ರ ಬಿದ್ದಿದ್ದು, ಹದ ಮಳೆಗೆ ಕೆಲವರು ಒಂದೆರಡು ಸಾಲು ಮಾತ್ರ ಉಳುಮೆ ಮಾಡಿ ಕೊಂಡಿದ್ದು ಬಿಟ್ಟರೆ ಬಿತ್ತನೆ ಹೊಲಗಳನ್ನು ಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಲಾಗಿಲ್ಲ. ಅಲ್ಲದೆ ಬಿತ್ತನೆ ಸಮಯ ದಲ್ಲಿಯೇ ಮಳೆ ಕೈಕೊಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಮುಂದೆನೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ಮೇವಿಗೆ ಬರ: ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ನಂತರದ ರೈತರ ಆದಾಯವೆಂದರೆ ಪಶುಸಂಗೋಪನೆ. ಆದರೆ ಪಶು ಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯವಾಗಿದೆ.
ಮಳೆ ರಾಯನ ಮುನಿಸಿನಿಂದ ಕಳೆದ ಬಾರಿಯಂತೆ ಈ ವರ್ಷವೂ ದನಕರುಗಳಿಗೂ ಮೇವಿಲ್ಲದಂತಾಗಿದೆ. ಈಗಾಗಲೆ ದನಕರುಗಳು, ಕುರಿ ಮೇಕೆ ಮೇಯಿಸಲು ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಬಾರದೆ ಭೀಕರ ಬರಗಾಲ ಎದುರಾಗಿದ್ದರೂ, ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಮೇವು ಬ್ಯಾಂಕುಗಳು ಅಥವಾ ಗೋಶಾಲೆ ತೆರೆಯದೆ ನಿರ್ಲಕ್ಷ್ಯ ವಹಿಸಿದೆ.
● ಬಿ. ರಂಗಸ್ವಾಮಿ