Advertisement

ಆಳಂದದಲ್ಲಿ ನೆರೆಯೂ ಇಲ್ಲ-ತೊರೆಯೂ ಇಲ್ಲ!

10:50 AM Aug 13, 2019 | Suhan S |

ಆಳಂದ: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇನ್ನುಳಿದ ಪ್ರದೇಶಗಳಲ್ಲಿ ನೀರಿನ ಪ್ರವಾಹವೇ ಹರಿದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಮಳೆಗಾಲ ಆರಂಭವಾಗಿ ಎರಡೂವರೆ ತಿಂಗಳಾದರೂ ತಾಲೂಕಿನಲ್ಲಿ ನಿರೀಕ್ಷಿತವಾಗಿ ಮಳೆ ಸುರಿಯದೇ, ಬೇಸಿಗೆಯಲ್ಲಿ ಬತ್ತಿದ ಕೆರೆ, ಬಾವಿ, ಹಳ್ಳ, ನಾಲಾಗಳಿಗೆ ಇಂದಿಗೂ ನೀರಿಲ್ಲದೆ ಜಲಕ್ಷಾಮದ ಆತಂಕ ಮೂಡಿಸಿದೆ.

Advertisement

ಪ್ರತಿ ಮಳೆಗಾಲದ ಜೂನ್‌-ಜುಲೈ ತಿಂಗಳಲ್ಲಿ ಬಿದ್ದ ಮಳೆಯಿಂದಲೇ ಕೆರೆ, ಬಾವಿ, ನಾಲಾ ಮತ್ತು ಹಳ್ಳಗಳಿಗೆ ನೀರುಕ್ಕಿ ಹರಿದು ಕೃಷಿ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುತ್ತಿತ್ತು. ಅಲ್ಲದೇ, ಕುಡಿಯುವ ನೀರಿನ ಮೂಲಗಳಲ್ಲೂ ನೀರಿನ ಸಂಗ್ರಹದಿಂದ ಹಿತವಾಗಿ ಮುಂದೆ ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆಗೆ ವರವಾಗಿ ಪರಿಣಮಿಸುತ್ತಿತ್ತು. ಆದರೆ ಈ ಬಾರಿ ಮಳೆಯ ಕಣ್ಣು ಮುಚ್ಚಾಲೆಯಿಂದಾಗಿ ನೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಳೆಗಾಲದ ಕೊನೆ ಅವಧಿಯಲ್ಲೇ ಮತ್ತೆ ನೀರಿನ ಬರ ಎದುರಾಗಿ ಜನ-ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗುವ ಭೀತಿ ಕಾಡುತ್ತಿದೆ.

ಸದ್ಯ ತಾಲೂಕಿನ ಐದು ಹೋಬಳಿ ಕೇಂದ್ರಗಳಲ್ಲಿ ಬಿದ್ದ ಸಾಧಾರಣ ಮಳೆಯಿಂದ ಕೃಷಿ ಚಟುವಟಿಕೆ ತುರುಸಿನಿಂದ ಸಾಗಿದೆ. ಕೆಲವು ಕಡೆ ಮರು ಬಿತ್ತನೆ ಕೈಗೊಂಡಿದ್ದಾರೆ. ಇನ್ನು ಕೆಲವು ಭಾಗದಲ್ಲಿ ಹಂಗಾಮಿನ ಬಿತ್ತನೆಯು ವಿಳಂಬವಾಗಿ ಶುರುವಾಗಿದ್ದು, ಇದಕ್ಕೆ ಮಳೆ ಏಕಕಾಲಕ್ಕೆ ಬಾರದೆ ಇರುವುದು ಕೃಷಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಕೃಷಿಕರ ಗಾಯದ ಮೇಲೆ ಬರೆ ಎಳೆದಿದೆ. ಈ ನಡುವೆ ಅನೇಕ ಕಡೆ ತೆರೆದ ಬಾವಿ, ಕೊಳವೆ ಬಾವಿಗಳಿಗೂ ನೀರಿಲ್ಲದೆ, ತೋಟಗಾರಿಕೆ ಬೆಳೆ ಉತ್ಪಾದನೆಯಲ್ಲೂ ತೀವ್ರ ಕುಂಠಿತವಾಗಿದೆ ಎಂದು ರೈತ ಸಮುದಾಯ ಅಳಲು ತೋಡಿಕೊಂಡಿದೆ. ನಿರೀಕ್ಷಿತ ಮಳೆ ಮುಂದೂಡಿದರೆ ಬಿತ್ತನೆಯಾದ ಹಲವು ಭಾಗದ ಬೆಳೆಗಳಿಗೆ ತೇವಾಂಶದ ಕೊರತೆಯನ್ನೂ ತಳ್ಳಿಹಾಕಲಾಗದು. ಕಳೆದ ವಾರ ಸುರಿದ ಜಿಟಿಜಿಟಿ, ತುಂತುರು ಮಳೆಯಿಂದ ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು, ಈ ಕಳೆ ನಿರ್ವಹಣೆಗೆ ರೈತರು ಹೈರಾಣಾಗಿದ್ದಾರೆ.

ತಾಲೂಕಿನ ಏಕೈಕ ಅಮರ್ಜಾ ಅಣೆಕಟ್ಟೆಯಲ್ಲಿ ಕೇವಲ 10 ಅಡಿ ನೀರು ಸಂಗ್ರವಾಗಿದೆ. ಈ ನೀರೂ ಇಂಗಿ ಯಥಾಸ್ಥಿತಿಗೆ ತಲುಪಿದರೆ, ಮುಂದಿನ ಮಳೆಗಳಲ್ಲಿ ನೀರು ಸಂಗ್ರಹವಾಗದಿದ್ದರೆ ಆಳಂದ ಪಟ್ಟಣ ಸೇರಿದಂತೆ ಕೇಂದ್ರೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ಐದು ಹಳ್ಳಿಗಳಿಗೆ ನೀರಿನ ಭೀಕರ ಬರವೂ ಕಾಡುವುದು ನಿಶ್ಚಿತ.

ಒಟ್ಟು ತಾಲೂಕಿನ 16 ಕೆರೆ ಹಾಗೂ 19 ಜಿನುಗು ಕೆರೆ ಸೇರಿ 35 ಕೆರೆಗಳ ಪೈಕಿ ಐದು ಕೆರೆಗಳಿಗೆ ಮಾತ್ರ ಶೇ. 50ರಷ್ಟು ನೀರು ಸಂಗ್ರಹವಿದೆ. ಅದರಲ್ಲಿ ನರೋಣಾ, ಆಳಂದ, ತಡಕಲ್, ಸಾಲೇಗಾಂವ, ಮಟಕಿ ಕೆರೆ ಒಳಗೊಂಡಿದೆ. ಆದರೆ ಈ ಕೆರೆ ಪೂರ್ಣ ಭರ್ತಿಯಾಗಿಲ್ಲ. 19 ಜಿನುಗು ಕೆರೆಗಳ ಪೈಕಿ ತಡಕಲ್ ಗ್ರಾಮದ ಎರಡು ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿವೆ.

Advertisement

ಈ ಕೆರೆಗಳಲ್ಲೂ ಸೋರಿಕೆ ಶುರುವಾಗಿದ್ದರಿಂದ ಒಂದು ಕೆರೆಯ ನೀರು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿಲ್ಲ. ಬಾಕಿ 30 ಕೆರೆ, ನೂರಾರು ತೆರೆದ ಬಾವಿ, ಕೊಳವೆ ಬಾವಿಗಳಿಗೆ ನೀರಿಲ್ಲ. ಅಲ್ಲದೇ, ನಾಲಾ, ಬದು. ಚೆಕ್‌ ಡ್ಯಾಂ ಹಳ್ಳ ಕೊಳ್ಳಗಳಿಗೆ ನೀರು ಹರಿದಿಲ್ಲ. ಇದರಿಂದ ಅಂತರ್ಜಲ ಹೆಚ್ಚಳವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈಗಿನಿಂದಲೇ ಜಿಲ್ಲೆ ಮತ್ತು ತಾಲೂಕು ಆಡಳಿತವು ಮುಂಜಾಗೃತಾ ಕ್ರಮವಾಗಿ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಮೇವಿನ ಬರ ಹಿಂಗಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಮುಖಂಡರು ಒತ್ತಾಯಿಸಿದ್ದಾರೆ.

•35 ಕೆರೆಗಳ ಪೈಕಿ 5ರಲ್ಲಿ ಮಾತ್ರಶೇ. 50 ನೀರು

•ಮಳೆ ಕೈಕೊಟ್ಟರೆ ಬಿತ್ತನೆಯಾದ ಬೆಳೆಗೂ ಕಂಟಕ

•ಎರಡೂವರೆ ತಿಂಗಳಾದರೂ ನಿರೀಕ್ಷಿತ ಮಳೆಯಿಲ್ಲ

•ಜಿಟಿಜಿಟಿ ಮಳೆಗೆ ಬೆಳೆಗಿಂತ ಹೆಚ್ಚಾದ ಕಳೆ-ರೈತ ಹೈರಾಣ

•ಅಮರ್ಜಾ ಅಣೆಕಟ್ಟೆಗೆ ಕೇವಲ 10 ಅಡಿ ನೀರು

•ಬತ್ತಿದ ಕೆರೆ- ಬಾವಿಗಳಿಗೂ ಮಳೆ ನೀರಿಲ್ಲ

 

•ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next