ವದೆಹಲಿ: ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳು ಹೊಂದಿರುವ ಮಾಹಿತಿ ಸರಿಯಾದುದಲ್ಲ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೈಲ್ವೆಯಲ್ಲಿ ಹೊಸ ತಂತ್ರಜ್ಞಾನ, ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ರೈಲ್ವೇಯ ಕೆಲ ಘಟಕಗಳಿಗೆ ಕಾರ್ಪೊರೇಟ್ ಕಂಪನಿಗಳ ರೀತಿಯಲ್ಲಿ ಕಾರ್ಯವೆಸಗುವಂತೆ ಮಾಡುವ ಶೈಲಿ ಅಳವಡಿಸಲಾಗುತ್ತದೆ ಎಂದಿದ್ದಾರೆ.
ಪ್ರತ್ಯೇಕ ರೈಲ್ವೇ ಬಜೆಟ್ ಮಂಡಿಸುವ ವ್ಯವಸ್ಥೆ ರದ್ದು ಮಾಡಿದ್ದನ್ನು ಗೋಯಲ್ ಸಮರ್ಥಿಸಿಕೊಂಡಿದ್ದಾರೆ. ರೈಲ್ವೆಯಲ್ಲಿ ಹೊಸ ವ್ಯವಸ್ಥೆಗಳನ್ನು ಅಳವಡಿಸಬೇಕಿದ್ದರೆ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ-ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ ನೀಡುತ್ತಿದ್ದೇವೆ. 64 ವರ್ಷಗಳಲ್ಲಿ ಅವಧಿಯಲ್ಲಿ 34 ಸಾವಿರ ಕಿಮೀ ಹಳಿ ಅಳವಡಿಸಲಾಗಿದ್ದರೆ, ಹಿಂದಿನ ಐದು ವರ್ಷದ ಅವಧಿಯಲ್ಲಿ 7 ಸಾವಿರ ಕಿಮೀ ಹಳಿ ಅಳವಡಿಸಲಾಗಿದೆ ಎಂದರು.
ವೈದ್ಯ ಸೀಟುಗಳು: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ 4,800 ವೈದ್ಯ ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಹಿಂದಿನ 2 ವರ್ಷಗಳ ಅವಧಿಯಲ್ಲಿ ಎಂಬಿಬಿಎಸ್ ವೈದ್ಯ ಸೀಟುಗಳ ಪ್ರಮಾಣ 24, 698 ಸೀಟುಗಳಷ್ಟು ಏರಿಕೆಯಾಗಿದೆ. ಅದರಲ್ಲಿ ಸ್ನಾತಕೋತ್ತರ ಪದವಿ ಸೀಟುಗಳೂ ಸೇರಿವೆ ಎಂದಿದ್ದಾರೆ. 2019-20ನೇ ಸಾಲಿನಲ್ಲಿ 10, 565 ಯು.ಜಿ.,ಸೀಟುಗಳು, 2,153 ಸ್ನಾತಕೋತ್ತರ ವೈದ್ಯ ಸೀಟುಗಳನ್ನು ನೀಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ದೇಶದಲ್ಲಿ ಅಲೋಪತಿ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ವಿಭಾಗಗಳನ್ನು ಒಳಗೊಂಡಂತೆ 19.47 ಲಕ್ಷಕ್ಕೂ ಅಧಿಕ ಮಂದಿ ವೈದ್ಯರಿದ್ದಾರೆ. ಈ ಪೈಕಿ 11,59, 309 ಮಂದಿ ವೈದ್ಯರು ರಾಜ್ಯ ಮತ್ತು ಭಾರತೀಯ ವೈದ್ಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ, 1,456 ಮಂದಿಗೆ ಒಬ್ಬ ವೈದ್ಯರಿದ್ದಾರೆ. ಇಷ್ಟಾದರೂ ಸೇವೆಗೆ ಲಭ್ಯರಿರುವ ವೈದ್ಯರ ಸಂಖ್ಯೆ 9.27 ಲಕ್ಷ ಮಾತ್ರ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.
ಯೋಜನೆ ಇದೆ: ಸರಿಯಾದ ಯೋಜನೆ ಮತ್ತು ವಾಸ್ತವಿಕ ಅಂಶಗಳನ್ನು ಗಮನಿಸಿಯೇ ಬಜೆಟ್ ಮಂಡಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ತಿಳಿಸಿದ್ದಾರೆ. ಬಂಡವಾಳ ಹೂಡಿಕೆ, ಕೃಷಿಗೆ ಆದ್ಯತೆ ನೀಡಲಾಗಿದೆ. 2024-25ನೇ ಸಾಲಿನಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನು 5 ಶತಕೋಟಿ ಡಾಲರ್‌ಗೆ ಏರಿಸಲು ಸೂಕ್ತ ಮಾರ್ಗ ಸೂಚಿಗಳನ್ನು ಹೊಂದಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ. ರಕ್ಷಣೆ, ಆಂತರಿಕ ಭದ್ರತೆ, ಪಿಂಚಣಿ ನೀಡಿಕೆ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಅನುಕೂಲವಾಗುವಂತೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.
ಅಪೌಷ್ಠಿಕತೆ ನಿವಾರಣೆಗೆ ಶ್ರಮಿಸಿ: ಪ್ರಧಾನಿ ಮೋದಿ ಸಲಹೆ
ಪಕ್ಷದ ಮಹಿಳಾ ಸಂಸದರು ಆರೋಗ್ಯ, ಶುಚಿತ್ವ, ಅಪೌಷ್ಠಿಕತೆ ಹೋಗಲಾಡಿಸುವಿಕೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ. ಬಿಜೆಪಿ ವತಿಯಿಂದ ಆಯ್ಕೆಯಾಗಿರುವ ಮಹಿಳಾ ಲೋಕಸಭಾ ಸದಸ್ಯರ ಜತೆಗೆ ಶುಕ್ರವಾರ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಮಹಿಳೆಯರಾಗಿರುವುದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರತಿಯೊಂದು ವಿಚಾರವನ್ನೂ ತಾಳ್ಮೆಯಿಂದ ಕೇಳಲು ಅವಕಾಶ ಇರುತ್ತದೆ. ಏಕೆಂದರೆ ಅವರಿಗೆ ಅಂಥ ಕೌಶಲ್ಯಗಳು ಇವೆ ಎಂದು ಹೇಳಿದ್ದಾರೆ. ಜತೆಗೆ ಸಂಸದರ ಅಭಿಪ್ರಾಯ, ಸಲಹೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಆಸ್ಥೆಯಿಂದ ಆಲಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಇದ್ದರು.