ಪಣಜಿ: ಗೋವಾದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸರ್ಕಾರ ಸ್ಥಿರವಾಗಿದೆ. ಅಭಿವೃದ್ಧಿಯ ವೇಗವೂ ಡಬಲ್ ಇಂಜಿನ್‍ನಲ್ಲಿ ಸಾಗುತ್ತಿರುವಾಗ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನವಾಡೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂಬ ವದಂತಿ ಹಬ್ಬುತ್ತಿದ್ದು, ಅದನ್ನು ಪ್ರತಿಪಕ್ಷಗಳು ಹಬ್ಬಿಸುತ್ತಿವೆ ಎಂದರು.
ಪೆಡ್ನೆಯ ಪ್ರಸಿದ್ಧ ಪನವೇಲ್‍ಗೆ ಆಗಮಿಸಿದ ತಾನವಾಡೆ ಅವರು ದೇವರ ದರ್ಶನ ಪಡೆದು ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದರು. ರಾಜ್ಯ ರಾಜಕೀಯದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು. ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ ಶಾಸಕರಿಗೆ ಪಕ್ಷ ಯಾವುದೇ ಭರವಸೆ ನೀಡಿಲ್ಲ. ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನೂ ಅವರು ತಳ್ಳಿ ಹಾಕಿದ್ದಾರೆ.
ಭವಿಷ್ಯದಲ್ಲಿ ಪೆಡ್ನೆ ಕ್ಷೇತ್ರದ ಶಾಸಕ ಪ್ರವೀಣ್ ಅರ್ಲೇಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ತಾನಾವಡೆ, ಅರ್ಲೇಕರ್ ರವರಿಗೆ ಪ್ರಸ್ತುತ ಕರಕುಶಲ ನಿಗಮ ನೀಡಲಾಗಿದೆ ಎಂದರು.
ಮಾಂದ್ರೆ ಶಾಸಕ ಜೀತ್ ಅರೋಲ್ಕರ್ ಬಿಜೆಪಿಗೆ ಸೇರಲು ಅವಕಾಶ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರು ಎಂಜಿಪಿ ಶಾಸಕ ಮತ್ತು ಹಿರಿಯ ನಾಯಕ ಸುದಿನ್ ಧವಲಿಕರ್ ಮತ್ತು ಮಾಂದ್ರೇ ಶಾಸಕ ಜೀತ್ ಅರೋಲ್ಕರ್ ಅವರು ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಜೀತ್ ಅರೋಲ್ಕರ್ ಪಕ್ಷಕ್ಕೆ ಸೇರಲು ಬಯಸಿದರೆ, ಅವರನ್ನು ನೇರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದ್ದು, ಸದ್ಯ ಅಂತಹ ಯಾವುದೇ ಪ್ರಸ್ತಾವನೆ ನಮ್ಮ ಬಳಿ ಬಂದಿಲ್ಲ. ಅಂತಹ ಪ್ರಸ್ತಾಪದ ಕುರಿತು ನಾವು ನಂತರ ಕಾಮೆಂಟ್ ಮಾಡುತ್ತೇವೆ ಎಂದರು.