Advertisement

“ಕಡಿಮೆ ಅಪಾಯದ ದೇಶದಿಂದ ಬಂದವರಿಗೆ ಕ್ವಾರಂಟೈನ್‌ ಇಲ್ಲ’

10:09 AM Jul 04, 2020 | mahesh |

ಲಂಡನ್‌: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಕುಸಿದ ಆರ್ಥಿಕತೆಗೆ ಉತ್ತೇಜನ ನೀಡಲು, ವಿದೇಶಿ ಪ್ರವಾಸಿಗರಿಗೆ ಯುನೈಟೆಡ್‌ ಕಿಂಗ್‌ಡಮ್‌ ಕ್ವಾರಂಟೈನ್‌ ರಹಿತ ಅವಕಾಶವನ್ನು ಕಲ್ಪಿಸಿದೆ. ಇದಕ್ಕೂ ಮೊದಲು ದೇಶಕ್ಕೆ ಬರುವವರು 14 ದಿನಗಳ ಕಡ್ಡಾಯ ಕ್ವಾರಂಟೈನ್‌ ಪೂರೈಸಬೇಕು ಎಂದು ಹೇಳಲಾಗಿತ್ತು. ಆದರೆ ಈಗ ಕಡಿಮೆ ಅಪಾಯದ ದೇಶದಿಂದ ಬರುವವರಿಗೆ ಕ್ವಾರಂಟೈನ್‌ ಇಲ್ಲ ಎಂದು ಹೇಳಲಾಗಿದೆ. ಫ್ರಾನ್ಸ್‌, ಸ್ಪೇನ್‌, ಜರ್ಮನಿ ದೇಶದ ಪ್ರವಾಸಿಗರಿಗೂ ಅದು ಅವಕಾಶ ಮಾಡಿಕೊಟ್ಟಿದೆ. ಈ ಬದಲಾದ ನಿಯಮಗಳು ಜು.10ರ ಬಳಿಕ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ದೇಶಗಳ ಜನರಿಗೆ ಯು.ಕೆ. ಗೆ ಬರಲು ಅವಕಾಶ ಕಲ್ಪಿಸಲಾಗಿದೆ ಎಂಬ ಬಗ್ಗೆ ಪಟ್ಟಿಯನ್ನು ಪ್ರಕಟ ಮಾಡಲಾಗುವುದು ಎಂದು ಸರಕಾರ ಮೂಲಗಳು ಹೇಳಿವೆ. ಇದರೊಂದಿಗೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡುವ ವೇಳೆ ಅದು ಅಮೆರಿಕದ ಪ್ರವಾಸಿಗರಿಗೆ ಅನುವು ಮಾಡಿಕೊಡುವುದು ಅನುಮಾನ ಎಂದು ಹೇಳಲಾಗಿದೆ.

Advertisement

ಈ ಬದಲಾದ ನಿಯಮದಿಂದಾಗಿ ಬ್ರಿಟಿಷ್‌ ನಾಗರಿಕರಿಗೆ ಮತ್ತು ಬ್ರಿಟಿಷ್‌ ಉದ್ಯಮಗಳಿಗೆ ಲಾಭವಾಗಲಿದೆ. ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಸಿಗಲಿದೆ ಎಂದು ಸಾರಿಗೆ ಕಾರ್ಯದರ್ಶಿ ಗ್ರಾಂಟ್‌ ಶಾಪ್ಸ್‌ ಅವರು ಹೇಳಿದ್ದಾರೆ. ಆದರೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅಥವಾ ನಿರ್ಬಂಧಗಳನ್ನು ಹೇರಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಇದು ಇಂಗ್ಲಂಡ್‌-ಯು.ಕೆ. ಸ್ಕಾಟ್ಲೆಂಡ್‌, ವೇಲ್ಸ್‌ ಮತ್ತು ಉತ್ತರ ಐರೆಲಂಡ್‌ನ‌ ತೀರ್ಮಾನವಾಗಿದ್ದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೊಂದಿಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಾಪ್ಸ್‌ ಅವರು ಹೇಳಿದ್ದಾರೆ.

ಇತ್ತ ಸ್ಕಾಟಿಷ್‌ ಮುಖ್ಯಮಂತ್ರಿ ನಿಕೋಲಾ ಸ್ಟ್ರಾಜೆನ್‌ ಅವರು ಲಾಕ್‌ಡೌನ್‌ ಸಡಿಲಗೊಳಿಸಿದ ಪ್ರಧಾನಿ ಜಾನ್ಸನ್‌ ಅವರ ತೀರ್ಮಾನವನ್ನು ಟೀಕಿಸಿದ್ದಾರೆ. ಲಾಕ್‌ಡೌನ್‌ ಸಡಿಲಿಕೆ ಅವಸರದ ಕ್ರಮ, ಈಗ ಪ್ರಕರಣಗಳ ಸಂಖ್ಯೆ ಏರುತ್ತಿದ್ದು ಇದರಿಂದ ಇಡೀ ದೇಶಕ್ಕೆ ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಲಾಕ್‌ಡೌನ್‌ ಸಡಿಲಿಕೆ ಮೊದಲು ವಿಮರ್ಶೆ ನಡೆಸಬೇಕಿದ್ದು, ಅದನ್ನು ಜಾರಿಗೆ ತರುವ ಮೊದಲು ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದವರು ಹೇಳಿದ್ದಾರೆ.

ಇದೇ ವೇಳೆ ಬೇರೆ ದೇಶಗಳಿಗೆ ತೆರಳುವ ಬ್ರಿಟನ್‌ ಪ್ರಜೆಗಳಿಗೂ ಯಾವುದೇ ಕ್ವಾರಂಟೈನ್‌ ಇರಲಾರದು. ಇದಕ್ಕಾಗಿ ವಿವಿಧ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ಸಾರಿಗೆ ಸಚಿವಾಲಯ ಹೇಳಿದೆ. ಇನ್ನು ಇಂಗ್ಲಂಡ್‌ನ‌ಲ್ಲಿ ಬಾರ್‌, ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಸಲೂನ್‌ಗಳು, ಅಂಗಡಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಐರೋಪ್ಯ ಒಕ್ಕೂಟ ದೇಶಗಳಿಗೂ ಮುಕ್ತ ಅವಕಾಶವಿದೆ. ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಕಳೆದ ಜ.31ರಂದು ಹೊರಬಂದಿದ್ದರೂ, ಈ ವರ್ಷಾಂತ್ಯದ ವರೆಗೆ ಐರೋಪ್ಯ ಒಕ್ಕೂಟದ ನಿಯಮಗಳನ್ನು ಅದು ಪಾಲಿಸಲಿದೆ. ಆದ್ದರಿಂದ ಮೊನ್ನೆಯಷ್ಟೇ ಅದು ಐರೋಪ್ಯ ಒಕ್ಕೂಟದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿತ್ತು. ಜತಗೆ ತನ್ನ ಗಡಿಯನ್ನು ಇತರ ದೇಶಗಳೊಂದಿಗೆ ಮುಕ್ತವಾಗಿ ತೆರೆದಿತ್ತು. ಯು.ಕೆ.ಯಲ್ಲಿ ಕೋವಿಡ್‌ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಈಗ ಐರೋಪ್ಯ ದೇಶಗಳಲ್ಲೇ ಅತಿ ಹೆಚ್ಚು ಸೋಂಕಿರುವ ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next