ಹಾವೇರಿ: ಕೋವಿಡ್ ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿರುವ ಸವಣೂರ ಪಟ್ಟಣ ರಾಜೀವಗಾಂಧಿ ನಗರ ಹಾಗೂ ಎಸ್. ಎಂ.ಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಲೇ ಬಾರದು. ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶಿಸಿದರು.
ಸವಣೂರು ಸೀಲ್‌ಡೌನ್ ಪ್ರದೇಶದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಉಪವಿಭಾಗಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದದಲ್ಲಿ ಅವರು ಈ ಆದೇಶ ನೀಡಿದರು.
ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿ ಉಚಿತ ಹಾಲು ವಿತರಣೆ, ಉಚಿತ ಆಹಾರ ಕಿಟ್ ಗಳ ವಿತರಣೆ ನಡೆಯಬೇಕು. ಸಾಧ್ಯವಾದರೆ ದಾನಿಗಳಿಂದ ನೆರವು ಪಡೆದು ತರಕಾರಿ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಪ್ರದೇಶದಲ್ಲಿ ಕಡ್ಡಾಯವಾಗಿ ಮನೆಯ ಶೌಚಾಲಯಗಳನ್ನೇ ಬಳಸುವಂತೆ ತಿಳಿವಳಿಕೆ ನೀಡಬೇಕು. ಬಯಲು ಬಹಿರ್ದೆಸೆಗೆ ನಿರ್ಬಂಧ ಹಾಕಬೇಕು. ಶೌಚಾಲಯ ವ್ಯವಸ್ಥೆ ಇಲ್ಲದವರಿಗೆ ಪುರಸಭೆಯಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾಹಿತಿ ನೀಡಿ, ಮನೆ ಮನೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸೀಲ್ ಡೌನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದರು. ಪಟ್ಟಣದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ
ನೀಡಲಾಗಿದ್ದು, ಖಾದರಭಾಗ್, ಸುಣಗಾರ ಓಣಿ, ಕಮಲಬಂಗಡಿ ಓಣಿಗಳಲ್ಲಿ ಮೆಲಾಥಿನ್ ದ್ರಾವಣ ಸಿಂಪಡಣೆ ಮಾಡಲಾಗಿದೆ. ಅಗ್ನಿಶಾಮಕ ವಾಹನದಿಂದ ಕಂಟೈನ್ಮೆಂಟ್ ಜೋನ್ ಪ್ರದೇಶದಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಹಾಗೂ 394 ಆಹಾರ್ ಕಿಟ್ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಎಸ್.ಎಂ. ಕೃಷ್ಣ ನಗರದಲ್ಲಿನ 374 ಮನೆಗಳಿಗೆ ಭೇಟಿ ನೀಡಿ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ ಹಾಗೂ ದೇಹದ ಉಷ್ಣಾಂಶವನ್ನು ಥರ್ಮಲ್ ಸ್ಕ್ಯಾನರ್‌ದಿಂದ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಏಳು ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಆಗಮಿಸಿದವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ 10 ತಂಡಗಳನ್ನು ರಚಿಸಿ ದಿನಕ್ಕೆ 1,068 ಮನೆಗಳನ್ನು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.