Advertisement

ಸಾರ್ವಜನಿಕರ ಭೇಟಿಯೇ ಇಲ್ಲ.. ಫೋನ್‌ನಲ್ಲೇ ಎಲ್ಲ..

11:56 AM Mar 28, 2020 | Suhan S |

ಹುಬ್ಬಳ್ಳಿ: ಸದಾ ಜನರ ನಡುವೆ ಓಡಾಡಿಕೊಂಡಿದ್ದ ಜನಪ್ರತಿನಿಧಿಗಳು ಕೂಡ ಕೋವಿಡ್ 19 ವೈರಸ್‌ ಭೀತಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸೋಂಕು ನಿಯಂತ್ರಿಸುವ ತುರ್ತು ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳೊಂದಿಗೆ ಫೋನ್‌ ಮೂಲಕ ಸಂಪರ್ಕ ಸಾಧಿಸಿ ಸಲಹೆ-ಸೂಚನೆಗಳನ್ನು ನೀಡುವಂತಾಗಿದೆ. ಜನರಿಲ್ಲದೆ ಜನಪ್ರತಿನಿಧಿಗಳ ಮನೆ ಬಿಕೋ ಎನ್ನುವಂತಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಅಧಿವೇಶನ ಮುಗಿಸಿಕೊಂಡು ಬಂದ ನಂತರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳ ಜತೆ ಚರ್ಚಿಸುತ್ತಾ ಕೊರೊನಾ ತಡೆ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳ ಮಾಹಿತಿ ಪಡೆಯುತ್ತಿದ್ದಾರೆ.

ಅಧಿವೇಶನ ಮುಗಿಸಿಕೊಂಡು ಬಂದಿರುವ ಶಾಸಕರು ಬಹುತೇಕ ಮನೆ ಸೇರಿದ್ದು, ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ 19 ವೈರಸ್‌ ಯಾರಿಗೆ ಅಂಟಿದೆ, ಯಾವಾಗ ಯಾರಿಂದ ಬರುತ್ತದೆ ಎನ್ನುವ ಆತಂಕ ಜನಪ್ರತಿನಿಧಿಗಳನ್ನು ಆವರಿಸಿದೆ. ಹೀಗಾಗಿ ಕೆಲವರಂತೂ ಮನೆಯಿಂದ ಹೊರಬರುತ್ತಿಲ್ಲ. ತಮ್ಮ ಮನೆಗಳಿಗೆ ಆಗಮಿಸದೆ ಫೋನ್‌ ಕರೆ ಮೂಲಕವೇ ಸಮಸ್ಯೆ ತಿಳಿಸುವಂತೆ ಸಾರ್ವಜನಿಕರಿಗೆ ಸೂಚಿಸುತ್ತಿದ್ದಾರೆ. ಆಪ್ತ ಸಹಾಯಕರು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಬರುವುದು ಬೇಡ ಎನ್ನುವಷ್ಟರ ಮಟ್ಟಿಗೆ ಕೆಲ ಶಾಸಕರಲ್ಲಿ ಕೋವಿಡ್ 19 ಭಯ ಆವರಿಸಿದೆ. ತಮ್ಮ ಕಚೇರಿಗಳನ್ನು ಬಂದ್‌ ಮಾಡಿ ಸಿಬ್ಬಂದಿಗೂ ರಜೆ ನೀಡಿದ್ದಾರೆ.

ಮನೆಯಿಂದಲೇ ಜಾಗೃತಿ: ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರವೇ ಪ್ರಮುಖ ಅಸ್ತ್ರ ಎನ್ನುವ ಕಾರಣದಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಸಂತೆಗಳನ್ನು ನಡೆಸದಂತೆ ಸೂಚನೆ ನೀಡುತ್ತಿದ್ದಾರೆ. ಪ್ರಾರ್ಥನಾ ಮಂದಿರಗಳಿಗೂ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದು ಒಳಿತು ಎನ್ನುವ ಸಂದೇಶ ನೀಡುತ್ತಿದ್ದಾರೆ. ಕೋವಿಡ್ 19 ಪರಿಣಾಮ, ಜಾಗೃತಿ ಹಾಗೂ ಅನುಸರಿಸಬೇಕಾದ ಅಗತ್ಯ ಕಾರ್ಯಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಅಧಿಕಾರಿಗಳ ಸಭೆಯ ಮೂಲಕವೇ ಕ್ಷೇತ್ರದ ಜನತೆಯ ಸಮಸ್ಯೆಗೆ ಪರಿಹಾರ ಎನ್ನುತ್ತಿದ್ದವರು ಫೋನ್‌ ಮೂಲಕವೇ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳ ಕುರಿತು ತಿಳಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಸಾಯಿನಿಕ ಸಿಂಪರಣೆ, ಸ್ವಚ್ಛತೆ, ನಾಲಾ ಸ್ವಚ್ಛತೆ ಕುರಿತು ಸೂಚನೆ ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸುವ ಕುರಿತು ಬರುವ ದೂರುಗಳನ್ನು ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿ ತಡೆಗಟ್ಟುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್ 19 ವೈರಸ್‌ ನಿಯಂತ್ರಣ, ಜನರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸುವುದು, ತುರ್ತು ಸೇವೆಗಳ ಕುರಿತು ವಿವಿಧ ಜಿಲ್ಲೆಗಳಲ್ಲಿ ಕೈಗೊಂಡಿರುವ ಕೆಲ ಉತ್ತಮ ಕಾರ್ಯಗಳನ್ನು ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಸೇರಿದಂತೆ ತುರ್ತು ಸೇವೆಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ತಿಳಿಸುವ ಕೆಲಸ ಶಾಸಕರು ಮಾಡುತ್ತಿದ್ದಾರೆ. ಲಾಕ್‌ಡೌನ್‌ ಒಂದೆಡೆಯಾದರೆ ವೈರಸ್‌ ಭೀತಿ ಜನಪ್ರತಿನಿಧಿಗಳನ್ನು ರಸ್ತೆಗಿಳಿಯದಂತೆ ಮಾಡಿದೆ. ಶಾಸಕರು ಮನೆಯಿಂದ ಹೊರ ಬರದೆ ಜನರಿಗೆ ಮಾದರಿಯಾಗಿದ್ದಾರೆ.

Advertisement

ಕ್ಷೇತ್ರದ ಸಮಸ್ಯೆಗಳು, ಕೋವಿಡ್ 19 ವೈರಸ್‌ ತಡೆಯುವ ನಿಟ್ಟಿನಲ್ಲಿ ಒಂದಿಷ್ಟು ಸಲಹೆ-ಸೂಚನೆಗಳನ್ನು ಅಧಿಕಾರಿಗಳಿಗೆ ಫೋನ್‌ ಮೂಲಕವೇ ನೀಡುತ್ತಿದ್ದೇನೆ. ಲಾಕ್‌ ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಹೊರಗೆ ಬಾರದೆ ಜನರಿಗೂ ಮನೆಯಲ್ಲಿ ಇರುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಗತ್ಯತೆ ಹೊರತುಪಡಿಸಿ ಜನರು ಹೊರಗೆ ಬಾರದೆ ಈ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು. -ಪ್ರಸಾದ ಅಬ್ಬಯ್ಯ, ಶಾಸಕರು, ಹು-ಧಾ ಪೂರ್ವ

ವಿದೇಶದಿಂದ ಬಂದಿರುವವರ ಮೇಲೆ ತೀವ್ರ ನಿಗಾ ಇಡುವಂತೆ ಅಲ್ಲಿನ ತಹಶೀಲ್ದಾರ, ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶಗಳಿಗೆ ಸೋಂಕು ತಗುಲದಂತೆ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದೇನೆ. -ಕುಸುಮಾವತಿ ಶಿವಳ್ಳಿ, ಶಾಸಕರು, ಕುಂದಗೋಳ

Advertisement

Udayavani is now on Telegram. Click here to join our channel and stay updated with the latest news.

Next