Advertisement

ಕಾಡಂಚಿನ ಗ್ರಾಮಗಳ ಜನರಿಗಿಲ್ಲ ರಕ್ಷಣೆ

03:30 PM Sep 30, 2019 | Suhan S |

ಮಾಸ್ತಿ: ಹೋಬಳಿಯ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಂಡನಹಳ್ಳಿ, ಕೊತ್ತೂರು, ಪಾಳ್ಯ ಸೇರಿ ತಮಿಳುನಾಡು ಗಡಿಗೆ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಜನ ಜೀವಭಯದಲ್ಲಿ ಜೀವನ ನಡೆಸುವಂತಾಗಿದೆ.

Advertisement

ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹೆಚ್ಚಾಗಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಮಾಲೂರು, ಬಂಗಾರಪೇಟೆ ಹಾಗೂ ನೆರೆಯ ತಮಿಳುನಾಡು ಗಡಿಗೂ ಹೊಂದಿಕೊಂಡಿದ್ದು, ಬೆಟ್ಟ-ಗುಡ್ಡದ ಸಾಲು, ಮೂತುನೂರು ಅರಣ್ಯದಿಂದ ಆವರಿಸಿಕೊಂಡಿವೆ. ಈ ಅರಣ್ಯ ಪ್ರದೇಶದಿಂದ ಚಿರತೆ, ಕರಡಿ, ಆನೆಗಳು, ಹಂದಿ ಸೇರಿ ಕಾಡು ಪ್ರಾಣಿಗಳು ಆಗಾಗ ಈ ಭಾಗದ ರೈತರ ಜಮೀನಿಗೆ, ಗ್ರಾಮಗಳಿಗೆ ದಾಳಿ ಮಾಡುತ್ತಾ, ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.

ಪದೇಪದೆ ದಾಳಿ: ವರ್ಷದ ಹಿಂದೆ ಕರಡಿಯೊಂದು ಗುಂಡ್ಲುಪಾಳ್ಯ ಗ್ರಾಮದ ವ್ಯಕ್ತಿಯ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. 6 ತಿಂಗಳಿಂದೀಚೆಗೆ ಕೊಂಡನಹಳ್ಳಿ, ಕೊತ್ತೂರು ಗ್ರಾಮದ ರೈತರಿಗೆ ಸೇರಿದ ಹಸುಗಳ ಮೇಲೆ ದಾಳಿ ಮಾಡಿರುವ ಚಿರತೆಯು 8 ಹಸುಗಳನ್ನು ತಿಂದು ಹಾಕಿದೆ. ಇದರ ಜೊತೆಗೆ ಕಾಡಾನೆಗಳ ಹಿಂಡು ಈ ಭಾಗದ ಗ್ರಾಮಗಳಿಗೆ ಪದೇಪದೆ ಲಗ್ಗೆ ಇಟ್ಟು, ರೈತರು ಬೆಳೆದ ತರಕಾರಿ, ಸೊಪ್ಪು, ಮಾವು, ತೆಂಗಿನ ಮರ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ತುಳಿದು ನಾಶ ಮಾಡುತ್ತಿವೆ.

ಪ್ರಯತ್ನ ಮಾಡುತ್ತಿಲ್ಲ: ವಾರದ ಹಿಂದೆ ಕೊಂಡನಹಳ್ಳಿ ಗ್ರಾಮದ ರೈತ ಸೊಣ್ಣೇಪಲ್ಲೆಪ್ಪ ಅವರಿಗೆ ಸೇರಿದ ಹಸುವನ್ನು ಚಿರತೆ ದಾಳಿ ಮಾಡಿ ತಿಂದು ಹಾಕಿದೆ. 8 ತಿಂಗಳಿಂದೀಚೆಗೆ ಚಿರತೆ ದಾಳಿಗೆ ಬಲಿಯಾದ ರಾಸುಗಳ ಮಾಲಿಕರಿಗೆ ಈವರೆಗೂ ಪರಿಹಾರ ಬಂದಿಲ್ಲ. ಅರಣ್ಯ ಇಲಾಖೆ ಕೊಡಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಹಸುವಿನ ಮಾಲಿಕರು ದೂರಿದ್ದಾರೆ.

ಬೋನಿಟ್ಟರೂ ಪ್ರಯೋಜನವಿಲ್ಲ: 8 ತಿಂಗಳ ಹಿಂದೆ ಟೇಕಲ್‌ ಸಮೀಪದ ಉಳ್ಳೇರಹಳ್ಳಿ ಬಳಿ ಅರಣ್ಯ ಪ್ರದೇಶದಲ್ಲಿ ಇಲಾಖೆ ಇಟ್ಟಿದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊಂಡನಹಳ್ಳಿ ಸಮೀಪವಿರುವ ಮೂತನೂರು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದರು. ಈ ಚಿರತೆಯೇ ಹಸುಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿದೆ. ಇದರಿಂದ ತಮ್ಮ ಜೀವವನ್ನು ಅಂಗೈಲಿಟ್ಟುಕೊಂಡು ಜೀವನ ನಡೆಸುವಂತಾಗಿದೆ. ಚಿರತೆ, ಹಿಡಿಯಲು ಕಾಟಾಚಾರಕ್ಕೆಂಬಂತೆ ಅರಣ್ಯ ಪ್ರದೇಶದಲ್ಲಿ ಬೋನು ಇಟ್ಟಿದ್ದಾರೆ ಹೊರತು, ಚಿರತೆ ಹಿಡಿಯಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನೆರೆಯ ತಮಿಳುನಾಡು ಗಡಿ ಹಾಗೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ಚಿರತೆ, ಕರಡಿ, ಕಾಡಾನೆಗಳು, ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಂಜೆಯಾದರೆ ಜನ ಹೊರ ಬರಲು ಎದುರುವಂತಾಗಿದೆ. ರೈತರು ಹಾಗೂ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ತಮ್ಮ ಜೀವವನ್ನು ಅಂಗೈಲಿಟ್ಟುಕೊಂಡು, ಬದುಕುವಂತಾಗಿದೆ ಎಂದು ಈ ಭಾಗದ ಜನತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕನಿಷ್ಠ ಪರಿಹಾರನಾದ್ರೂ ಕೊಡಿ: ಆನೆಗಳು, ಚಿರತೆ, ಕರಡಿ, ಹಂದಿ ಸೇರಿ ಹಲವು ಕಾಡು ಪ್ರಾಣಿಗಳು ಅರಣ್ಯ ಪ್ರದೇಶದಿಂದ ಗಡಿ ಭಾಗದ ಗ್ರಾಮಗಳತ್ತ ಲಗ್ಗೆ ಇಟ್ಟು, ಜಾನುವಾರುಗಳ ದಾಳಿ ಮೇಲೆ ಮಾಡುತ್ತಿವೆ. ಅಲ್ಲದೆ, ಬೆಳೆದಿರುವ ತರಕಾರಿ, ಸೊಪ್ಪು, ಕಡಲೇಕಾಯಿ, ತೊಗರಿ, ಹಲವು ಬೆಳೆಗಳನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೆತ್ತಿಕೊಳ್ಳುತ್ತಿಲ್ಲ. ಕನಿಷ್ಠ ದಾಳಿಯಿಂದ ಆದ ನಷ್ಟ ಪರಿಹಾರವ ನ್ನಾದ್ರೂ ಅರಣ್ಯ ಇಲಾಖೆ ಕೊಡಿಸಬೇಕು ಎಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.

 

-ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next