Advertisement

ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ

02:15 AM Jun 01, 2018 | Team Udayavani |

ವಿಶೇಷ ವರದಿ – ಕೋಟ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮಾಬುಕಳ, ಕೋಟ ಹೈಸ್ಕೂಲ್‌ ಮುಂತಾದ ಅಗತ್ಯ ಕಡೆಗಳಲ್ಲಿ ಬಸ್ಸು ತಂಗುದಾಣಗಳಿಲ್ಲದ ಕಾರಣ ತಾತ್ಕಾಲಿಕ ತಂಗುದಾಣಗಳೇ ಪ್ರಯಾಣಿಕರಿಗೆ ಆಸರೆಯಾಗಿವೆ. ಈ ತಂಗುದಾಣಗಳಲ್ಲಿಯೂ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆ ತಲೆದೋರಿದೆ. ಕೋಟ ಹೈಸ್ಕೂಲ್‌ ಬಳಿಯಿಂದ ಉಡುಪಿಗೆ ತೆರಳುವ ಕಡೆೆ ತಂಗುದಾಣವಿಲ್ಲ. ಕುಂದಾಪುರ ಕಡೆಗೆ ಹಳೆಯ ತಂಗುದಾಣವಿದ್ದರೂ ಶಿಥಿಲಾವಸ್ಥೆಯಲ್ಲಿದ್ದು, ಮಳೆ ನೀರು ಆವೃತಗೊಳ್ಳುತ್ತದೆ. ಎರಡು ಪ್ರಮುಖ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಉಡುಪಿ, ಕುಂದಾಪುರ ಕಡೆಗೆ ಕೆಲಸಕ್ಕೆ ತೆರಳುವವರು ಪ್ರತಿನಿತ್ಯ ಈ ಪ್ರದೇಶದಲ್ಲಿ ಬಸ್ಸಿಗಾಗಿ ಕಾಯುತ್ತಾರೆ. ಇದೇ ಸ್ಥಿತಿ ಎರಡು ವಿದ್ಯಾಸಂಸ್ಥೆಗಳಿರುವ ಮಾಬುಕಳದ್ದೂ ಕೂಡ. 

Advertisement

ರಸ್ತೆ ಮೇಲೆ ಬಸ್ಸು ನಿಲುಗಡೆ ; ಹೆದ್ದಾರಿಯಲ್ಲೇ ನಿಲ್ಲುವ ಬಸ್‌ 
ಕೋಟ ಹೈಸ್ಕೂಲ್‌ ನಲ್ಲಿ ಬಸ್ಸು ತಂಗುದಾಣ, ಬಸ್‌ ಪಾಥ್‌ ಇಲ್ಲದಿರುವುದರಿಂದ ಬಸ್ಸುಗಳು ರಸ್ತೆಯಲ್ಲೇ  ನಿಲ್ಲುತ್ತವೆೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಹಾಗೂ ಬನ್ನಾಡಿ ರಸ್ತೆಯಿಂದ ಸಾಲಿಗ್ರಾಮ ಕಡೆಗೆ ತೆರಳುವ ವಾಹನಗಳಿಗೂ ಸಮಸ್ಯೆಯಾಗುತ್ತಿದೆ. ಇದೇ ಕಾರಣದಿಂದ ಅನೇಕ ಅಪಘಾತಗಳೂ ನಡೆದಿವೆ.

ಸಮಸ್ಯೆಗೆ ಕಾರಣ
ಹೆದ್ದಾರಿ ನೀಲಿ ನಕಾಶೆ ತಯಾರಿಸುವ ಸಂದರ್ಭ ಕೋಟ ಹೈಸ್ಕೂಲ್‌ ಹಾಗೂ ಮಾಬುಕಳ ಬಸ್ಸು ನಿಲ್ದಾಣವನ್ನು ಎಕ್ಸ್‌ಫ್ರೆಸ್‌ ನಿಲ್ದಾಣವಾಗಿ ಪರಿಗಣಿಸದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣ. ಕೋಟ ಹೈಸ್ಕೂಲ್‌ ಗೆ ಪರ್ಯಾಯವಾಗಿ ಕೋಟ ಪೆಟ್ರೋಲ್‌ ಬಂಕ್‌ ಸಮೀಪ ನಿಲ್ದಾಣ ಗುರುತಿಸಿ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ಈ ತಂಗುದಾಣ ಸಾರ್ವಜನಿಕರಿಗೆ ಅಷ್ಟೇನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ನಿತ್ಯ ಸಮಸ್ಯೆ
ಮಾಬುಕಳದಲ್ಲಿ ರೋಟರಿ ವತಿಯಿಂದ ಈ ಹಿಂದೆ ತಾತ್ಕಾಲಿಕ ತಂಗುದಾಣ ನಿರ್ಮಿಸಲಾಗಿತ್ತು. ಅನಂತರ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವಾಗ ಇಲ್ಲಿ  ಬೀದಿ ದೀಪ, ತಂಗುದಾಣದ ವ್ಯವಸ್ಥೆ ಮಾಡಲಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ.
– ಶ್ರೀಪತಿ ಅಧಿಕಾರಿ, ಸ್ಥಳೀಯ ನಿವಾಸಿ

ವಿದ್ಯಾರ್ಥಿಗಳಿಗೆ ಸಮಸ್ಯೆ
ಕೋಟ ಹೈಸ್ಕೂಲ್‌ನಂತಹ ಪ್ರಮುಖ ಸ್ಥಳದಲ್ಲಿ ತಂಗುದಾಣ ನಿರ್ಮಾಣವಾಗದಿರುವುದು ವಿಪರ್ಯಾಸ. ಆದಷ್ಟು ಶೀಘ್ರ ಸಂಬಂಧಪಟ್ಟವರು ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
– ಅಕ್ಷಯ್‌ ಕುಮಾರ್‌, ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next