ವಾಷಿಂಗ್ಟನ್: ಕೋವಿಡ್-19 ವಿಚಾರವಾಗಿ ಅಮೆರಿಕಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನಡುವೆ ಸಂಘರ್ಷ ತಾರಕಕ್ಕೇರಿದ್ದು, ವೈರಸ್ ಚೀನಾದ ವುಹಾನ್ ಲ್ಯಾಬ್ ನಲ್ಲೇ ಸೃಷ್ಟಿಯಾಗಿದೆ ಎನ್ನುವ ಡೊನಾಲ್ಡ್ ಟ್ರಂಪ್ ಮಾತಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ವಾಷಿಂಗ್ಟನ್ ಅಧಿಕಾರಿಗಳು ಒದಗಿಸಿಲ್ಲ ಎಂದು WHO ತಿಳಿಸಿದೆ.
ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕಾ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಪುರಾವೆಗಳು ನಮಗೆ ದೊರೆತಿಲ್ಲ. ನಮ್ಮ ದೃಷ್ಟಿಕೋನದಲ್ಲಿ ಇದು ಕೇವಲ ಊಹಾತ್ಮಕವಾಗಿಯೇ ಉಳಿದಿದೆ ಎಂದು WHOನ ತುರ್ತು ನಿರ್ದೇಶಕರಲ್ಲೊಬ್ಬರಾದ ಮೈಕಲ್ ರಯಾನ್ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ, ಕೋವಿಡ್-19 ವೈರಸ್ ವುಹಾನ್ ನ ಲ್ಯಾಬ್ ನಲ್ಲೇ ಸೃಷ್ಟಿಯಾಗಿದ್ದು, ನಂತರ ಇದು ಸಾಂಕ್ರಮಿಕ ರೋಗವಾಗಿ ಬದಲಾಯಿತು. ಚೀನಾದಲ್ಲಿ ಈ ವೈರಸ್ ಗೆ ಸಾವಿರಾರು ಮಂದಿ ಬಲಿಯಾಗಿದ್ದು, ನೈಜ ಅಂಕಿ ಅಂಶಗಳನ್ನು ಮುಚ್ಚಿಟ್ಟಿದೆ ಎಂದು ಆರೋಪಿಸುತ್ತಲೇ ಬಂದಿದ್ದರು. ಮಾತ್ರವಲ್ಲದೆ WHO ಕೂಡ ಮುನ್ನೇಚ್ಚರಿಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು ಎಂದು ಅದಕ್ಕೆ ಅಮೆರಿಕಾದಿಂದ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದ್ದರು.
ಭಾನುವಾರ(ಮೇ.3), ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವುಹಾನ್‌ನಲ್ಲಿರುವ ವೈರಾಲಜಿ ಪ್ರಯೋಗಾಲಯದಿಂದ ಕೋವಿಡ್-19 ವೈರಸ್ ಹುಟ್ಟಿಕೊಂಡಿತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದರು.
“ಈಗ ಜಗತ್ತಿನಾದ್ಯಂತ ವೈರಸ್ ಹರಡಿದ್ದು, ಲಕ್ಷ ಲಕ್ಷ ಮಂದಿ ಇದರ ಪರಿಣಾಮವಾಗಿ ಪ್ರಾಣ ತ್ಯೆಜಿಸಿದ್ದಾರೆ. ಚೀನಾವು ವಿಶ್ವಕ್ಕೆ ಸೋಂಕು ತಗುಲಿಸಿದ ಇತಿಹಾಸವನ್ನು ಹೊಂದಿದೆ, ಇದೀಗ ಅವರಿಗೆ ಗುಣಮಟ್ಟದ ಪ್ರಯೋಗಾಲಯಗಳನ್ನು ನಡೆಸುವ ಶಕ್ತಿಯಿದೆ ಎಂಬುದು ಕೂಡ ಜಗಜ್ಜಾಹೀರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.