Advertisement
ಇಲ್ಲಿ ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಿಂದ 17.22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜು ಕಟ್ಟೆಯ ಕಟ್ಟಡ ಕಳೆದ ಸೆ. 18ರಂದು ಉದ್ಘಾಟನೆಗೊಂಡು ಬಳಿಕ ಮಣಿನಾಲ್ಕೂರು ಗ್ರಾ.ಪಂ.ಗೆ ಹಸ್ತಾಂತರಗೊಂಡಿದೆ. ಕಳೆದ ನಾಲ್ಕು ವಾರಗಳಿಂದ ಹರಾಜು ಕಟ್ಟೆಯಲ್ಲಿ ವಾರದ ಸಂತೆ ನಡೆಯುತ್ತಿದೆ. ಆರಂಭದಲ್ಲಿ ಕೆಲವೇ ವ್ಯಾಪಾರಿಗಳು ಬಂದಿದ್ದು, ಈಗ ವಾರದಿಂದ ವಾರಕ್ಕೆ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯವಾಗಿ ಮಂಗಳವಾರ ಯಾವುದೇ ಸಂತೆ ಇಲ್ಲದಿರುವುದರಿಂದ ಸಂತೆ ವ್ಯಾಪಾರಿಗಳಿಗೆ ಅನುಕೂಲವಾಗಲೆಂದೇ ದಿನ ನಿಗದಿಪಡಿಸಲಾಗಿದೆ. ಉಪ್ಪಿನಂಗಡಿ, ಬೆಳ್ತಂಗಡಿ, ಪುತ್ತೂರು, ಕಲ್ಲಡ್ಕ, ಸುಳ್ಯ, ವಾಮದಪದವು, ಮೂಡುಬಿದಿರೆ ಹೀಗೆ ವಿವಿಧ ಕಡೆಗಳಿಂದ ಬರುವ ವ್ಯಾಪಾರಿಗಳು ಮಣಿನಾಲ್ಕೂರು ಸಂತೆಕಟ್ಟೆಯಲ್ಲಿ ಠಿಕಾಣಿ ಹೂಡಿ ವ್ಯಾಪಾರ ನಿರತರಾಗಿರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮೀಣ ಭಾಗದ ಜನರು ಸಾಮಗ್ರಿಗಳನ್ನು ಪಡೆದುಕೊಳ್ಳಲು ಬರುತ್ತಾರೆ.
ನಬಾರ್ಡ್ ಯೋಜನೆಯಲ್ಲಿ 17.22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಚ್ಚು ಹರಾಜು ಸಂತೆಯಲ್ಲಿ ಶೌಚಾಲಯದ ಕೊರತೆ ಕಾಡುತ್ತಿದೆ. ದೂರದೂರಿಂದ ಬರುವ ಮಾರಾಟಗಾರರಿಗೆ ಬಹಿರ್ದೆಸೆಗೆ ಗುಡ್ಡ ಪ್ರದೇಶ ಇಲ್ಲವೆ ಬಯಲು ಪ್ರದೇಶ ವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದೂರದ ಊರಿನ ಅವರಿಗೆ ಈ ಊರಿನ ಪರಿಚಯವೂ ಇಲ್ಲದೆ ಇರುವುದರಿಂದ ಅವರು ಮುಜುಗರದಿಂದ ತೊಂದರೆ ಅನುಭವಿಸುತ್ತಿರುವುದಾಗಿ ದೂರಿದ್ದಾರೆ. ಸಂತೆಕಟ್ಟೆಗೆ ಇದುವರೆಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆಯೂ ಆಗಿಲ್ಲ. ವ್ಯಾಪಾರಿಗಳು, ಗ್ರಾಹಕರಿಗೆ ಸಮಸ್ಯೆ
ಈ ಭಾಗದಲ್ಲಿ ವಾರದ ಸಂತೆ ವಗ್ಗ, ಉಪ್ಪಿನಂಗಡಿಯಲ್ಲಿ ಮಾತ್ರ ನಡೆಯುತ್ತಿದ್ದು, ಮಣಿನಾಲ್ಕೂರು, ಅಲ್ಲಿಪಾದೆ, ದೈವಸ್ಥಳ, ಸರಪಾಡಿ, ಉಳಿ, ಅಜಿಲಮೊಗರು ಭಾಗದ ಜನರು ಮಣಿನಾಲ್ಕೂರು ಸಂತೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದರಿಂದ ಜನರೂ ವ್ಯಾಪಾರಸ್ಥರೂ ತೊಂದರೆ ಅನುಭವಿಸಬೇಕಾಗಿದೆ.
Related Articles
ನೂತನವಾಗಿ ನಿರ್ಮಾಣವಾದ ಹರಾಜು ಕಟ್ಟೆಯಲ್ಲಿ ಶೌಚಾಲಯ ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗಿಲ್ಲ. ಮುಂದಿನ ದಿನಗಳಲ್ಲಿ ಪಂ. ವತಿಯಿಂದ ಹಳೆಯ ಪಂ. ಕಚೇರಿಯ ಕಟ್ಟಡದ ಬಳಿಯಲ್ಲಿ ಶೌಚಾಲಯದ ನಿರ್ಮಾಣದ ವ್ಯವಸ್ಥೆ ಮಾಡಲಾಗುವುದು.
- ಗೀತಾ ಶ್ರೀಧರ ಪೂಜಾರಿ, ಅಧ್ಯಕ್ಷರು, ಮಣಿನಾಲ್ಕೂರು ಗ್ರಾ.ಪಂ.
Advertisement