ಕೋಲಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾವು ಮಾರಾಟಕ್ಕೆ ತೊಂದರೆಯಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರೈತರು ಮತ್ತು ವ್ಯಾಪಾರಿಗಳಿಗೆ ಭರವಸೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾವು ಬೆಳೆಗಾರರು ಮತ್ತು ವ್ಯಾಪಾರಿಗಳ ಸಭೆಯ ನಂತರ ಮಾಧ್ಯಮದವ ರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್, ಶ್ರೀನಿವಾಸಪುರ ತಾಲೂಕಿ ನಲ್ಲಿಯೇ 25 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ಮಾರುಕಟ್ಟೆ ಒದಗಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಾರುಕಟ್ಟೆ ವ್ಯವಸ್ಥೆ: ಜಿಲ್ಲೆಯಲ್ಲಿನ ಮಾವು ಕೊಯ್ಲಿಗೆ ಬರಲು ಇನ್ನು ಒಂದು ತಿಂಗಳು ಇರುವುದರಿಂದ ಮಾವು ಬೆಳೆಗಾರರಿಗೆ ತೊಂದರೆ ಆಗದಂತೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಕೆಎಂಎಫ್‌ನವರು ಏಜೆನ್ಸಿ ಮೂಲಕ ಖರೀದಿ ಮಾಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹಾಪ್ ಕಾಮ್ಸ್ ಮೂಲಕವಾಗಿಯೂ ಮಾವನ್ನು ಮಾರಾಟ ಮಾಡಲು ಸರ್ಕಾರದ ಪ್ರಧಾನ ಕಾರ್ಯ ದರ್ಶಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಶಿವಮೊಗ್ಗ, ತುಮಕೂರು, ಬೆಳಗಾಂ ಮುಂತಾದ ಜಿಲ್ಲೆಗಳಲ್ಲಿಯೂ ಕೋಲಾ ರದ ಮಾವಿಗೆ ಮಾರುಕಟ್ಟೆ ಮಾಡಿಕೊಡಲಾಗುವುದು, ಕೊರೊನಾ ವೈರಸ್‌ನ ಹಾಟ್ ಸ್ಪಾಟಾಗಿರುವ ಮೈಸೂರು ಜಿಲ್ಲೆಯಲ್ಲಿ ಮಾರಾಟ ಮಾಡುವುದು ಬೇಡ ಎಂದರು.
ನಂದಿನಿ ಪಾರ್ಲರ್‌ಗಳಲ್ಲಿಯೂ ಮಾವು ಮಾರಾಟ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಲಾಗುವುದು. ಇದಲ್ಲದೆ ಬೆಂಗಳೂರಿನಲ್ಲಿ 720 ಅಪಾರ್ಟ್‌ಮೆಂಟ್ಸ್‌ಗಳಿವೆ ಅಂತಹ ಜಾಗಗಳಲ್ಲಿಯೂ ಮಾರಾಟ ಮಾಡಲಿಕ್ಕೆ ಅವಕಾಶ ಕೊಡಲಾಗುವುದು. ಈ ಸಂಬಂಧ ಬಿಬಿಎಂಪಿ ಮತ್ತು ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.
ಚಿತ್ತೂರು ಮತ್ತು ಕೃಷ್ಣಗಿರಿಯಲ್ಲಿ ಪಲ್ಪ್ ಇಂಡಸ್ಟ್ರೀಗಳು ಇರುವುದರಿಂದ ಆ ಇಂಡಸ್ಟ್ರೀಗಳಿಗೂ ಹಣ್ಣನ್ನು ಪೂರೈಕೆ ಮಾಡುವ ವಿಚಾರ ದಲ್ಲಿ ಪ್ರತ್ಯೇಕ ಸಭೆ ಕರೆಯಲಾಗುವುದು. ಮಾವು ಸರಬರಾಜಿಗೆ ಯಾವುದೇ ತೊಂದರೆ ಇಲ್ಲ ಮಾವು ಮಾರಾಟ ಮತ್ತು ಸರಬರಾಜಿಗೆ ಪಾಸ್ ನೀಡಲಾಗುವುದು ಎಂದರು.
ಶ್ರೀನಿವಾಸಪುರದಲ್ಲಿ ಎಪಿಎಂಸಿ ಮಾರುಕಟ್ಟೆ ಜತೆಗೆ ಸರ್ಕಾರಿ ಜಮೀನಿನಲ್ಲಿ ಮಾರಾಟ ಮಾಡಲು ಅನುಮತಿ ಕೇಳಲಾಗಿದೆ. ಅವಕಾಶ ಮಾಡಿ ಕೊಡಲಾಗುವುದು ಎಂದು ತಿಳಿಸಿದರು. ಪಡಿತರ ವಿತರಣೆ: ಕಳೆದ ಎರಡು ದಿವಸಗಳಿಂದಲೂ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿ ಇರುವ ಎಲ್ಲರಿಗೂ ಆಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಡಿಪೋಗಳವರು ಪಡಿತರ ಚೀಟಿದಾರರಿಂದ 10 ರೂ. ವಸೂಲಿ ಮಾಡುತ್ತಿದ್ದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.