ಕಾರವಾರ: ಇಲ್ಲಿನ ಸರ್ವಋತು ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಅಲೆತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸಪೂಜಾರಿ ಸಮ್ಮುಖದಲ್ಲಿ ಡಿಸಿ ಕಚೇರಿಯಲ್ಲಿ ಮೀನುಗಾರ ಮುಖಂಡರ ಅಹವಾಲು ಆಲಿಕೆ ಸಭೆ ಮಂಗಳವಾರ ನಡೆಯಿತು.
ಸಚಿವರು ತಾಳ್ಮೆಯಿಂದ ಮೀನುಗಾರ ಮುಖಂಡರ ಆತಂಕವನ್ನು ಆಲಿಸಿದರು. ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಕಾರವಾರ ಸಮುದ್ರ ಕೊರೆತಕ್ಕೆ ತುತ್ತಾಗಬಹುದು. ಅಲೆತಡೆಗೋಡೆಯನ್ನು ಬಾವುಟ ಕಟ್ಟೆಯ ಸರಹದ್ದು ಮೀರಿ, ಮಕ್ಕಳ ಉದ್ಯಾನವನದಪ್ಯಾರಾಗೋಲಾದಿಂದ ಪ್ರಾರಂಭಿಸುತ್ತಿರುವುದು ಅವೈಜ್ಞಾನಿಕ ಎಂದು ವಾದ ಮಂಡಿಸಿದರು. ಕಾರವಾರ ಬಂದರು ಈಗ ಹೇಗಿದೆಯೋ ಹಾಗೆ ಇರಲಿ. ಇಲ್ಲಿ ಎರಡನೇ ಹಂತದ ವಿಸ್ತರಣೆ ಅಗತ್ಯವಿಲ್ಲ. ಬೀಚ್ ಪ್ರವಾಸಿಗರಿಗೆ, ಸಾಂಪ್ರದಾಯಿಕ ಮೀನುಗಾರರಿಗೆ ಉಳಿಯಬೇಕು. ಯಾಂತ್ರಿಕ ಮೀನುಗಾರರಿಗೂ ಬಂದರು ವಿಸ್ತರಣೆಯಿಂದ ತೊಂದರೆಯಾಗಲಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು.
ಕೆ.ಟಿ. ತಾಂಡೇಲ, ಪ್ರಸಾದ್ ಕಾರವಾರಕರ್, ಬಿ.ಎಸ್. ಪೈ, ಪ್ರೀತಮ್ ಮಾಸೂರಕರ್ ಬಂದರು ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದರು. ಫಿಶರಿಸ್ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಕಾರವಾರ ಬಂದರಿನ ಗುಣವನ್ನು ಸುದೀರ್ಘವಾಗಿ ವಿವರಿಸಿದರು. ಬಂದರು ವಿಸ್ತರಣೆ, ಅಲೆತಡೆಗೋಡೆ ಯೋಜನೆಗಳನ್ನು ಬೇರೆಡೆ ಸ್ಥಳಾಂತರಿಸಿ, ಕಾರವಾರಕ್ಕೆ ಈ ಯೋಜನೆಗಳು ಬೇಡ ಎಂದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಈ ಯೋಜನೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾದುದು. ಅವರೇ ಯೋಜನೆಗೆ ಬಜೆಟ್‌ನಲ್ಲಿ ಹಣ ನೀಡಿ, ಅಡಿಗಲ್ಲು ಸಹ ಹಾಕಿದ್ದರು. ಆಗ ಮೀನುಗಾರ ಮುಖಂಡರು ಯೋಜನೆಗೆ ವಿರೋಧ ವ್ಯಕ್ತಮಾಡದೇ, ಈಗ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಸುದೀರ್ಘ ಚರ್ಚೆ ಆಲಿಸಿದ ಮೀನುಗಾರಿಕೆ ಮತ್ತು ಬಂದರು ಸಚಿವರು ಮೀನುಗಾರರಿಗೆ ತೊಂದರೆಯಾಗದಿರುವುದನ್ನು ಮತ್ತೂಮ್ಮೆ ಖಚಿತ ಮಾಡಲಾಗುವುದು. ಉನ್ನತ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ಜೊತೆ ಚರ್ಚಿಸಲಾಗುವುದು. ಈ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ ಎಂದು ಅಧಿಕಾರಿಗಳಿಂದ ಲಿಖೀತ ಭರವಸೆ ನೀಡಲಾಗುವುದು. ಉನ್ನತ ಮಟ್ಟದ ಚರ್ಚೆಯ ನಂತರವೇ ಖಚಿತ ನಿರ್ಧಾರಕ್ಕೆ ಬರಲಾಗುವುದು. ಈಗ ಮೀನುಗಾರರಿಗೆ ತೊಂದರೆ ಕೊಡುವ ಯಾವುದೇ ಕೆಲಸ ಮಾಡಲ್ಲ ಎಂಬ ಭರವಸೆ ನೀಡಬಲ್ಲೆ.
ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಇವತ್ತಿನ ಸಭೆಯಲ್ಲಿ ಬೆಳಕು ಚೆಲ್ಲಲಾಗಿದೆ. ತಂತ್ರಜ್ಞರಿಂದ ಮಾಹಿತಿ ಪಡೆದು, ಸರ್ಕಾರದ ನಿಲುವು ತಿಳಿಸಲಾಗುವುದು ಎಂದರು. ಯೋಜನೆ ನಿಲ್ಲಲಿದೆ ಅಥವಾ ಮುಂದುವರಿಯಲಿದೆ ಎಂಬ ಸ್ಪಷ್ಟ ನಿರ್ಣಯ ಅಂತಿಮವಾಗಿ ಹೊರಡಲಿಲ್ಲ. ಜಿಲ್ಲಾಧಿ ಕಾರಿ ಕಚೇರಿ ಹೊರ ಆವರಣದಲ್ಲಿದ್ದ ಸಾವಿರಾರು ಮೀನುಗಾರರನ್ನು, ಸಭೆಯ ನಂತರ ಸಚಿವ ಪೂಜಾರಿ ಭೇಟಿ ಮಾಡಿದರು.