ವಿಶ್ವಸಂಸ್ಥೆ/ನ್ಯೂಯಾರ್ಕ್: ಪಾಕಿಸ್ತಾನದ ಜತೆಗೆ ಮಾತುಕತೆ ನಡೆಸಲು ಭಾರತ ಮುಂದಾಗಿದೆ. ಆದರೆ, ಭಯೋತ್ಪಾದನೆಯೇ ಅಡ್ಡಿ ಎಂದಿದ್ದಾರೆ ವಿದೇಶಾಂಗ ಸಚಿವ ಎಸ್.ಜೈಶಂಕರ್. ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿಚಾರವನ್ನು ಕಾಶ್ಮೀರ ವಿಚಾರಕ್ಕೆ ಪಾಕಿಸ್ತಾನ ಬೆಸೆದು ಬಿಟ್ಟಿದೆ ಎಂದು ಹೇಳಿದ್ದಾರೆ. ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಚೀನಾ ಮತ್ತು ಪಾಕಿಸ್ತಾನ ಆಕ್ಷೇಪ ಮಾಡಿದೆ ಎಂದರು. ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದರಿಂದಾಗಿ ಇತರ ರಾಷ್ಟ್ರಗಳ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದಿಂದಾಗಿ ಭಾರತದ ನೆರೆಯ ರಾಷ್ಟ್ರಕ್ಕೆ 70 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕುಕೃತ್ಯಗಳಿಗೆ ತಡೆಯೊ ಡ್ಡಿದಂತಾಗಿದೆ ಎಂದರು. ಮುಂಬೈನಲ್ಲಿಯೂ ಕೂಡ ಪಾಕ್ ಪ್ರೇರಿತ ಉಗ್ರರೇ ದಾಳಿ ನಡೆಸಿದರು. ಕಾಶ್ಮೀರ ಹೊರತಾಗಿಯೂ ಕೂಡ ದೇಶದ ಇತರ ಭಾಗಗಳಲ್ಲಿಯೂ ಅವರು ದಾಳಿ ನಡೆಸಬಲ್ಲರು ಎಂದು ಹೇಳಿದ್ದಾರೆ.
ಪ್ರೋತ್ಸಾಹ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಜತೆಗೆ ಭಾರತ ಹೊಂದಿರುವ ಬಾಂಧವ್ಯ ಬಲಪಡಿಸಲು ಭಾರತಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶ್ವೇತ ಭವನ ಹೇಳಿದೆ. ಮಂಗಳವಾರ ಇಬ್ಬರು ನಾಯಕರು 40 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಬಲವಂತದಿಂದ ಅಲ್ಲ: ಕಾಶ್ಮೀರ ವಿವಾದವನ್ನು ಬಲವಂತದಿಂದ ಪರಿಹರಿಸಲು ಸಾಧ್ಯವಿಲ್ಲ. ಅದನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಟರ್ಕಿಯ ಅಧ್ಯಕ್ಷ ರೀಪ್ ತಯ್ಯಪ್ ಎಡೋಗನ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವುದಕ್ಕೆ ಮೊದಲು ಅವರು ಈ ಮಾತುಗಳನ್ನಾಡಿದ್ದಾರೆ.