ನವದೆಹಲಿ: ಸಹರಾ ಹಾಗೂ ಬಿರ್ಲಾ ಕಂಪನಿಗಳಿಂದ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಸ್ವೀಕರಿಸಿದ್ದಾರೆಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನಿಖೆಗೆ ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಪಿಐಎಲ್ ಅನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ. ಈ ಮೂಲಕ ಇತ್ತೀಚೆಗಷ್ಟೇ ಪ್ರಧಾನಿ ವಿರುದ್ಧ ದೂರಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪದಲ್ಲಿ ಹುರಳಿಲ್ಲದಂತಾಗಿದೆ.
ಸಹರಾ ಡೈರಿ ಪ್ರಕರಣದಲ್ಲಿ ಪ್ರಧಾನಿ ಮೋದಿ ಹಾಗೂ ಇತರರ ವಿರುದ್ಧದ ಆರೋಪದ ಬಗ್ಗೆ ವಿಶೇಷ ತನಿಖಾ ತಂಡದಿಂದ ಯಾವುದೇ ತನಿಖೆ ನಡೆಸಲು ಆದೇಶ ನೀಡಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಹರಾ ಮತ್ತು ಬಿರ್ಲಾ ಕಂಪನಿಗಳಿಂದ ವಶಪಡಿಸಿಕೊಂಡಿದ್ದ ದಾಖಲೆಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹಣ ಸಂದಾಯ ಮಾಡಿರುವ ಅಂಶಗಳಿವೆ ಎಂದು ಆರೋಪಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ತಾನು ಬಾಯ್ಬಿಟ್ರೆ ಭೂಕಂಪನವಾಗಲಿದೆ ಎಂದು ಹೇಳಿ ಪ್ರಧಾನಿ ಮೋದಿ ವಿರುದ್ಧ ಭೂಷಣ್ ಮಾಡಿದ್ದ ಹಳೇ ಆರೋಪವನ್ನೇ ಗುಜರಾತ್ ನಲ್ಲಿ ಪುನರಾವರ್ತಿಸಿದ್ದರು.
ಭೂಷಣ್ ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಡೈರಿಯನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.