ಹುಬ್ಬಳ್ಳಿ: ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಡುವ ತೀರ್ಮಾನ ಮಾಡಿದ್ದಾರೆ. ಅವರ ಮೇಲೆ ಪಕ್ಷದ ಹೈಕಮಾಂಡ್ ಯಾವುದೇ ಒತ್ತಡ ಹೇರಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಈಶ್ವರಪ್ಪ ಜೊತೆ ಮಾತನಾಡಿದ್ದೇನೆ. ನೂರಕ್ಕೆ ನೂರು ನಾನು ನಿರಪರಾಧಿ. ಆದಷ್ಟು ಬೇಗನೆ ತನಿಖೆ ಮಾಡಿ, ಆರೋಪದಿಂದ ಮುಕ್ತನಾಗುತ್ತೇನೆ ಎಂದು ಅವರೇ ಹೇಳಿದ್ದಾರೆ. ತನಿಖೆಯಿಂದ ಎಲ್ಲಾ ಸಂತ್ಯಾಂಶ ಹೊರಗೆ ಬರಲಿದೆ ಎಂದರು.
ಈಶ್ವರಪ್ಪ ಬಂಧಿಸಬೇಕೆನ್ನುವ ಕಾಂಗ್ರೆಸ್ ನವರು, ಈ ಹಿಂದೆ ಕೂಡ ಕೆ.ಜೆ.ಜಾರ್ಜ್ ರನ್ನು ಬಂಧನವಾಗಿಲ್ಲ. ಕರ್ನಾಟಕ ಸೇರಿ ಸಿಬಿಐ ಸಹ ಅವರನ್ನು ಬಂಧಿಸಿರಲಿಲ್ಲ. ಪೊಲೀಸರಿಗೆ ಏನು ಆವಶ್ಯಕತೆ ಎನ್ನುವುದು ಅವರಿಗೆ ಗೊತ್ತು. ಇವರೇ ತನಿಖಾಧಿಕಾರಿ, ಸರಕಾರಿ ಅಭಿಯೋಜಕ, ನ್ಯಾಯಾಧೀಶರಾಗುವ ಅವಶ್ಯಕತೆ ಇಲ್ಲ. ಮುಕ್ತ ತನಿಖೆಗೆ ಅವಕಾಶ ಕೊಡಿ. ಸತ್ಯ ಹೊರಗೆ ಬರಲಿದೆ, ಯಾಕೆ ಗಾಬರಿಯಾಗುತ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
ಇದನ್ನೂ ಓದಿ:ಕೋವಿಡ್ ಮುಗಿಯಿತೆಂದು ಆಪರೇಷನ್ ಮೂಲಕ ಕಿವಿ ಕತ್ತರಿಸಿಕೊಂಡ ಮಾನವ ಸೈತಾನ್ !
ಕಾಮಗಾರಿ, ವರ್ಕ್ ಆರ್ಡರ್ ಅವೆಲ್ಲ ನೋಡಿದಾಗ ತನಿಖೆ ಆದಮೇಲೆ ಗೊತ್ತಾಗುತ್ತದೆ. ಈಶ್ವರಪ್ಪ ಸಹ ಈ ಕೇಸ್ ನಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಯಾರಿಗೆ ಹಿನ್ನೆಡೆ, ಯಾರಿಗೆ ಮುನ್ನಡೆ ಎನ್ನುವುದು ಮುಂದೆ ಗೊತ್ತಾಗುತ್ತದೆ ಎಂದರು.
ರಮೇಶ ಜಾರಕಿಹೊಳಿ ಬಾಂಬ್ ಸಿಡಿಸುವ ಬಗ್ಗೆ ಅವರನ್ನೇ ಕೇಳಿ ಎಂದಷ್ಟೇ ಸಿಎಂ ಹೇಳಿದರು.