Advertisement
ಕೆಲವು ದಿನಗಳ ಹಿಂದೆ ನಿಗಮ, ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿರುವ ಸರಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಾತ್ರ ಕೈಬಿಟ್ಟಿದ್ದು, ಪ್ರಾಧಿಕಾರದ ಕುರಿತ ನಿರಾಸಕ್ತಿಯನ್ನು ಪ್ರದರ್ಶಿಸಿದೆ. ಕರಾವಳಿಯ ಸಮಗ್ರ ಅಭಿವೃದ್ಧಿಯ ಸಂಕಲ್ಪದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು 2008ರಲ್ಲಿ ಸರಕಾರ ಸೃಷ್ಟಿಸಿತ್ತು. ಬಳಿಕ ಬೆರಳೆಣಿಕೆ ಯೋಜನೆಗಳನ್ನು ಬಿಟ್ಟರೆ ಯಾವುದೇ ಪ್ರಮುಖ ಯೋಜನೆಗಳು ಕರಾವಳಿ ಭಾಗದಲ್ಲಿ ಜಾರಿಯಾಗಲೇ ಇಲ್ಲ.
ಪ್ರಾಧಿಕಾರದ ಅಧ್ಯಕ್ಷರಿಗೆ ಸಚಿವರ ಸ್ಥಾನಮಾನ ಇದೆ. ಕಳೆದ ಬಾರಿ ಕುಮಟಾದ ಶಾಸಕರಾದ ಶಾರದಾ ಮೋಹನ್ ಈ ಸ್ಥಾನದಲ್ಲಿದ್ದರು. ಒಂದು ವರ್ಷ ಅವರು ಜವಾಬ್ದಾರಿಯಲ್ಲಿದ್ದರು. ಅದಕ್ಕೂ ಮುನ್ನ ನಿವೇದಿತ್ ಆಳ್ವ ಇದ್ದರು. ನೂತನ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಧ್ಯಕ್ಷರ ನೇಮಕದ ಬಗ್ಗೆ ಗಮನವೇ ಹರಿಸಿಲ್ಲ. ಕಳೆದ ವರ್ಷವಷ್ಟೇ ಖರೀದಿಸಿದ್ದ ಹೊಸ ಕಾರು ಅನಾಥವಾಗಿದೆ! 2015ರ ಆ. 19ರಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣ ಪ್ರಮಾಣದ ಕಾರ್ಯದರ್ಶಿಯವರನ್ನು ನೇಮಿಸಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಅವರಿಗೆ ಹೆಚ್ಚುವರಿಯಾಗಿ ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಹೊಣೆಗಾರಿಕೆಯೂ ಇದೆ!
Related Articles
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಆರಂಭದ ಸಮಯದಲ್ಲಿ ಅಧ್ಯಕ್ಷರು, ಐವರು ಸದಸ್ಯರನ್ನು ನೇಮಿಸಲಾಗಿತ್ತು. ಬಳಿಕ ಬಂದ ಸರಕಾರಗಳು ಸಚಿವರು, ಶಾಸಕರ ಬೆಂಬಲಿಗರನ್ನು ಸಮಾಧಾನ ಪಡಿಸಲು ಸದಸ್ಯ ಹುದ್ದೆಗಳಿಗೆ ನೇಮಕ ಮಾಡುತ್ತಲೇ ಇದ್ದವು. ಕಳೆದ ಬಾರಿ ಒಟ್ಟು ಸದಸ್ಯರ ಸಂಖ್ಯೆಯೇ 26 ದಾಟಿತ್ತು. ಈ ಕಾರಣದಿಂದ ಭಿನ್ನ ಧ್ವನಿಗಳು ವ್ಯಕ್ತವಾಗಿ ಪ್ರಾಧಿಕಾರದ ನೈಜ ಆಶಯವೇ ಮೂಲೆಗುಂಪಾಯಿತು.
Advertisement
“ಅಭಿವೃದ್ಧಿ’ ವರದಿಗೆ ಧೂಳು!ರಸ್ತೆ, ಪ್ರವಾಸೋದ್ಯಮ, ಬಂದರು ಸಹಿತ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯೊಂದಿಗೆ ಯೋಜನೆಗಳನ್ನು ಗುರುತಿಸಿ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಜವಾಬ್ದಾರಿಯಿತ್ತು. ಹೀಗಾಗಿಯೇ ತಲಪಾಡಿಯಿಂದ ಉ.ಕನ್ನಡದ ವರೆಗೆ ಮೀನುಗಾರಿಕಾ ರಸ್ತೆ, ಆತ್ರಾಡಿಯಿಂದ ಬಜಪೆ ವಿಮಾನ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ಸಹಿತ ವಿವಿಧ ಮಹತ್ವದ ಯೋಜನೆ ಗಳ ಡಿಪಿಆರ್ ಸರಕಾರಕ್ಕೆ ಸಲ್ಲಿಸಲಾಗಿತ್ತು. ಸಾವಿರಾರು ಪುಟಗಳ ಈ ವರದಿಗೆ ಧೂಳು ಹಿಡಿಯುತ್ತಿದೆಯೇ ಹೊರತು ಬೆಳವಣಿಗೆ ಏನೂ ಆಗಿಲ್ಲ. ಮಂಗಳೂರು ಪುರಭವನದ ಎದುರು ಸ್ಕೈ ವಾಕ್ ನಿರ್ಮಾಣಕ್ಕೆ ಪ್ರಾಧಿಕಾರ ಶಿಲಾನ್ಯಾಸ ನಡೆಸಿತ್ತು. ಆದರೀಗ ಆ ಯೋಜನೆ ಪ್ರಾಧಿಕಾರದ ಪಟ್ಟಿಯಲ್ಲಿಯೇ ಇಲ್ಲ! ಅನುದಾನವೂ ಕಡಿತ
ಪ್ರಾಧಿಕಾರ ಆರಂಭವಾದ 2009 10ರಲ್ಲಿ ಬಜೆಟ್‌ನಲ್ಲಿ ಘೋಷಿಸಿದಂತೆ 1 ಕೋ.ರೂ.ಅನುದಾನ ಬಿಡುಗಡೆ ಮಾಡಿ 37.10 ಲಕ್ಷ ರೂ. ಖರ್ಚು ಮಾಡಲಾಗಿತ್ತು. 2010 11ರಲ್ಲಿ 3 ಕೋ.ರೂ. ಘೋಷಿಸಿದ ಸರಕಾರ 1.50 ಕೋ. ಮಾತ್ರ ಬಿಡುಗಡೆ ಮಾಡಿ 1.26 ಕೋ.ರೂ ಖರ್ಚಾಗಿತ್ತು. 2011 12ರಲ್ಲಿ 3 ಕೋ.ರೂ.ಗಳಲ್ಲಿ 1.50 ಕೋ.ರೂ. ಮಾತ್ರ ಬಂದಿತ್ತು. 2012 13ರಲ್ಲಿ 10 ಕೋ.ರೂ. ಘೋಷಿಸಿ 2.50 ಕೋ.ರೂ. ಬಿಡುಗಡೆ ಮಾಡಿತ್ತು. ಹೀಗಾಗಿ 2013 14ರಲ್ಲಿ 1 ಕೋ.ರೂ ಮಾತ್ರ ಘೋಷಿಸಿ 50 ಲಕ್ಷ ರೂ. ಹಾಗೂ 2014 15ರಲ್ಲಿ 1 ಕೋ.ರೂ. ಪ್ರಕಟಿಸಿ 54 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿತ್ತು. 2015 16ರಲ್ಲಿ 10 ಕೋ.ರೂ. , 2016 17ರಲ್ಲಿ 15 ಕೋ.ರೂ. ಘೋಷಿಸಿ ಅಷ್ಟೇ ಹಣವನ್ನು ಬಿಡುಗಡೆ ಮಾಡಿತ್ತು. ಆದರೆ 2017 18ರಲ್ಲಿ 20 ಕೋ.ರೂ. ಘೋಷಿಸಿ 15.86 ಕೋ.ರೂ. ಅನುದಾನ ಮಾತ್ರ ಬಿಡುಗಡೆ ಮಾಡಿ, 2018 19ಕ್ಕೆ 9.11 ಕೋ.ರೂ. ಹೇಳಿ 4.55 ಕೋ.ರೂ. ಮಾತ್ರ ಬಿಡುಗಡೆ ಮಾಡಿದೆ. “ಕರಾವಳಿ ಅಭಿವೃದ್ಧಿ’ ಪ್ರಾಧಿಕಾರದ ಮೂಲಕ ಕರಾವಳಿ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ನೀಡಲಾಗಿದೆ. ಅಧ್ಯಕ್ಷರು, ಸದಸ್ಯರ ನೇಮಕಾತಿಯನ್ನು ಸರಕಾರ ಶೀಘ್ರ ನಡೆಸಲಿದೆ. ಪ್ರಾಧಿಕಾರದ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ತೊಡಕಾಗಿಲ್ಲ.
– ಪ್ರದೀಪ್ ಡಿ’ಸೋಜಾ, ಕಾರ್ಯದರ್ಶಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದಿನೇಶ್ ಇರಾ