Advertisement
ಮಹಾರಾಯ, ನಾನು ವರ್ಷಗಳಿಂದ ಜಯಂತರ ಕತೆಗಳನ್ನು ಓದುತ್ತ ಬಂದಿದ್ದೇನೆ, ತುಂಬ ಇಷ್ಟಪಟ್ಟಿದ್ದೇನೆ. ಆದರೆ ಇದೆಂಥದು ಮಹಾರಾಯ, ಅರ್ಬನ್ ಪವರ್ಟಿ, ಚೈಲ್ಡ… ಲೇಬರು, ಜೆಂಡರ್ ಸ್ಟಿಗ್ಮಾ, ಕ್ಲಾಸ್ ಮತ್ತು ಕಾಸ್ಟ್ ಇಶ್ಯೂ ! ನನಗೆ ಯಾವತ್ತೂ ಜಯಂತರ ಕತೆಗಳಲ್ಲಿ ಇವೆಲ್ಲ ಇದೆ ಅಂತ ಅನಿಸಿದ್ದೇ ಇಲ್ಲ ನೋಡು”ಡಿಎಸ್‌ಸಿ ಸೌತ್ ಏಷಿಯನ್ ಲಿಟರೇಚರ್ ಪ್ರೈಜ್ 2018ರ ಅಂತಿಮ ಸುತ್ತಿಗೆ ಜಯಂತರ ನೋ ಪ್ರಸೆಂಟ್ಸ್ ಪ್ಲೀಸ್ ತಲುಪಿದಾಗ ಅದರ ತೀರ್ಪುಗಾರರಲ್ಲೊಬ್ಬರಾದ ನಂದನಾ ಸೆನ್ ಬರೆದಿರುವ ಕೆಲವು ಮಾತುಗಳ ಬಗ್ಗೆ ನನ್ನ ಒಬ್ಬರು ಗೆಳೆಯ ಹೀಗೆ ಅಚ್ಚರಿ ವ್ಯಕ್ತಪಡಿಸಿದ್ದರು. ನಂದನಾ ಸೆನ್ ಅವರ ಕೆಲವು ಮಾತುಗಳನ್ನು ಕೇಳುತ್ತಿದ್ದರೆ ಅವರ ಕಣ್ಣುಗಳಿಂದ ಜಯಂತರ ಕತೆಗಳನ್ನು ಮತ್ತೂಮ್ಮೆ ಕಾಣಬೇಕೆಂಬ ಆಸೆ ಹುಟ್ಟುವುದು ಸುಳ್ಳಲ್ಲ.
ಇವತ್ತಿಗೂ ಆಗಾಗ ತಾವು ಬರೆದಿದ್ದನ್ನು ನನ್ನಂಥ ನಾಲ್ಕು ಮಂದಿಗೆ ಕಳಿಸಿ ನಮ್ಮ ಮಾತಿಗೆ ಕಾಯುವ, “ನಿನ್ನ ಮಾತು ಕೇಳಿ ಸ್ವಲ್ಪ ಧೈರ್ಯ ಬಂತು ನೋಡು’ ಎನ್ನುವ ಜಯಂತ ಕಾಯ್ಕಿಣಿಯವರ ಹದಿನಾರು ಕತೆಗಳ ಒಂದು ಪುಟ್ಟ ಸಂಕಲನ ಮುಂಬಯಿ ಶಹರದ ಕತೆಗಳು ಎನ್ನುವ ಲೇಬಲ್ಲಿನೊಂದಿಗೆ ಇಂಗ್ಲಿಷಿಗೆ ಅನುವಾದಗೊಂಡಾಗ ಅದನ್ನು ಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಂತಿರಲಿಲ್ಲ. ತುಂಬ ಹಿಂದೆಯೇ ವಿಶ್ವನಾಥ ಹುಲಿಕಲ್ ಅವರು ಡಾಟ್ಸ… ಎಂಡ್ ಲೈನ್ಸ್ ಹೆಸರಿನಲ್ಲಿ ಜಯಂತರ ಒಂದಿಷ್ಟು ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸಿದಾಗಲೂ ಹೀಗೆಯೇ ಆಗಿತ್ತು. ಆದರೆ, ಇಂಗ್ಲಿಷ್ ಓದುಗರು ಈ ಸಂಕಲನದ ಕತೆಗಳ ಬಗ್ಗೆ ಎಲ್ಲಿಲ್ಲದ ಉತ್ಸಾಹದಿಂದ ಮಾತನಾಡುವುದನ್ನು ಕೇಳಿದಾಗಲೆಲ್ಲ ಒಂಥರಾ ಮುಜುಗರವಾಗುತ್ತಿತ್ತು. ಜಯಂತರ ಬಗ್ಗೆ ಎಲ್ಲ ಗೊತ್ತು, ಅವರ ಎಲ್ಲ ಕತೆಗಳನ್ನು ಅರೆದು ಕುಡಿದು ಬಿಟ್ಟಿದ್ದೇವೆ ಎನ್ನುವ ಅಹಂಕಾರದಿಂದ ನಮ್ಮ ಕಣ್ಣುಗಳು ಮಬ್ಬುಗೊಂಡವೆ? ಅಥವಾ ತೆರೆದಷ್ಟೇ ಬಾಗಿಲು ಮೂಲಕ ದಕ್ಕಿದ ಇಣುಕು ನೋಟದಲ್ಲಿ ಇಂಗ್ಲಿಷ್ ಓದುಗರಿಗೆ ನಮಗೆ ಕಾಣಿಸದೇ ಹೋದ¨ªೆಲ್ಲ ಕಾಣಿಸುತ್ತಿದೆಯೆ? ಹೊಟೇಲು ಮಾಣಿಗಳ ಮುಂಜಾನೆಯನ್ನು ನೆನೆಯುತ್ತ ಜಯಂತ ಬರೆಯುವ ಜಾಗರದ ಜೀವಗಳಿಗೆ, ಸ್ಟವ್ವಿನ ನೀಲಿ ಜ್ವಾಲೆಯ ಸದ್ದಿನಲ್ಲಿ ಬೆಚ್ಚಗಾಗುವ ಚಹಾದ ಕೆಟ್ಲನ್ನು ನಿದ್ದೆ ಗಣ್ಣಲ್ಲೆ ಕಾಣುವ ದೂರಪ್ರಯಾಣದ ಯಾತ್ರಿಕರಿಗೆ, ಹೊಟ್ಟೆಪಾಡಿನ ಅನಿವಾರ್ಯ ಹುಟ್ಟಿಸುವ ಒಬ್ಬ ಮಿಥುನ್ ನಂಬರ್ ಟೂಗೆ, ತಟ್ಟನೇ ಮೊಬೈಕ್ ಸುತ್ತುವ ಮೃತ್ಯುಕೂಪದಂಥ ಬಾವಿಯಲ್ಲಿ ತೆರೆದುಕೊಳ್ಳುವ ಒಂದು ಅಂತಃಕರಣದ ಬಾಗಿಲಿಗೆ, ಸರ್ಕಸ್ಸಿನ ಡೇರೆಯೊಳಗೇ ಇಡೀ ಬದುಕಿನ ಎಲ್ಲ ಏರಿಳಿತಗಳನ್ನು ಕಂಡು ಹಣ್ಣಾದ ಡಂಪಿಗೆ, “ನಿಮಗೆ ನಿಜಕ್ಕೂ ಈ ಮಗು ಬೇಕಾ ಸಾರ್?’ ಎಂದು ಕಂಕುಳಲ್ಲಿದ್ದ ಮಗುವನ್ನು ತುಸು ಮುಂದೆ ಮಾಡಿದ ಗೊಂಬೆ ಮಾರುವ ಹೆಂಗಸಿಗೆ, ಹೆತ್ತ ತಾಯಿಯನ್ನು ಹುಡುಕಿ ಹೊರಡುವ ಮಧುಬಾಲಾಳಂಥ ಹೆಣ್ಣುಮಗಳಿಗೆ, ಅವಳಂಥ ಹೆಣ್ಣನ್ನು ಹುಡುಕಿ ಹಿಂದೆಯೇ ಹೊರಟ ಏಕಾಂತನಿಗೆ ಇರುವ ಸಾಮಾಜಿಕ, ತಾತ್ವಿಕ, ರಾಜಕೀಯ ಆಯಾಮಗಳನ್ನೆಲ್ಲ ಕಾಣದಂತೆ ಒದ್ದೆ ಗಣ್ಣಾದ ಕನ್ನಡದ ಓದುಗನಿಗೆ- ಜಯಂತರ ಕತೆಗಳ ಹೊಸ ಹೊಸ ಆಯಾಮಗಳನ್ನು, ಅರ್ಥಸಾಧ್ಯತೆಗಳನ್ನು, ಅವು ತೆರೆದಿಡುವ ನಿಷ್ಠುರ ಸತ್ಯಗಳನ್ನು ಕಾಣಿಸಲು ಅನುವಾದ ಅಗತ್ಯವಾಗಿತ್ತೆ? ಈ ವಿಸ್ಮತಿಗೆ ಜಯಂತರ ಭಾಷೆಯ ಮೋಹಕ ಲಯ ಎಷ್ಟರ ಮಟ್ಟಿಗೆ ಕಾರಣ, ಓದುಗ/ವಿಮರ್ಶಕರ ಔದಾಸೀನ್ಯ ಎಷ್ಟರಮಟ್ಟಿಗೆ ಕಾರಣ?
Related Articles
.
ಎಂಟು ವರ್ಷಗಳ ಹಿಂದೆ ಕನಸ್ಟ್ರಕ್ಷನ್ ಕಂಪೆನಿಯೊಂದು ಸಾಹಿತ್ಯಕ್ಕೆ ಇಪ್ಪತ್ತೈದು ಸಾವಿರ ಡಾಲರುಗಳ ಮೊತ್ತದ ಬಹುಮಾನವನ್ನು ಮೀಸಲಿಡುವಾಗ ಆರಿಸಿಕೊಂಡ ಭೂಪ್ರದೇಶ ದಕ್ಷಿಣ ಏಷ್ಯಾ ರಾಷ್ಟ್ರಗಳದ್ದು. ಆದರೆ, ಬರೆದವರು ಯಾವ ದೇಶದವರೂ ಆಗಿರಬಹುದು, ಅವರು ಬರೆದಿದ್ದು ಮಾತ್ರ ಈ ದೇಶಗಳ ಕುರಿತಾಗಿರಬೇಕು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್, ಬರ್ಮಾ ಮತ್ತು ಅಫ್ಘಾನಿಸ್ತಾನದ ಬದುಕು, ಕಲೆ, ಸಂಸ್ಕೃತಿಗೆ ಅಂತರಾಷ್ಟ್ರೀಯ ಅಭಿವ್ಯಕ್ತಿಗೆ ಇಲ್ಲೊಂದು ವೇದಿಕೆ ಹೀಗೆ ರೂಪುಗೊಂಡಿತು. ಪಾರ್ಸಿ ಜನಾಂಗದ ಶವಸಂಸ್ಕಾರದ ಪದ್ಧತಿ ಮತ್ತು ಅದರ ಫಲಾನುಭವಿ(!)ಗಳ ಕತೆ ಹೇಳುವ ಸೈರಸ್ ಮಿಸಿŒಯ ಕ್ರಾನಿಕಲ್ ಆಫ್ ಅ ಕಾಪ್ಸ್ì ಬೇರರ್’ (2014), ಕಲ್ಕತ್ತಾದ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿಕೊಂಡ ನಕ್ಸಲೈಟ್ ಚಳುವಳಿಯ ಆಸುಪಾಸಿನ ಕಥಾನಕವನ್ನೇ ಕೇಂದ್ರವಾಗಿರಿಸಿಕೊಂಡಿರುವ ಜುಂಪಾ ಲಹಿರಿಯವರ ದ ಲೋ ಲ್ಯಾಂಡ್ (2015) ಮುಂತಾಗಿ ಗಮನಿಸಿದರೆ ಪ್ರಶಸ್ತಿ ಸ್ಥಾಪನೆಯ ಉದ್ದೇಶ ಮತ್ತು ಅದರ ಧ್ಯೇಯದ ಅನುಸಾರ ಅದು ನಿರ್ವಹಿಸಲ್ಪಡುತ್ತಿರುವುದರ ಸ್ಥೂಲ ಪರಿಕಲ್ಪನೆ ಮೂಡಬಹುದು. ಹಾಗಾಗಿಯೇ ಮುಂಬಯಿ ಬದುಕಿನ, ಅಲ್ಲಿನ ದೈನಂದಿನ ಒಂದು ಸೂûಾ¾ತಿಸೂಕ್ಷ್ಮಚಿತ್ರವನ್ನು ಕಟ್ಟಿಕೊಡುವ ಜಯಂತರ ಪ್ರಯತ್ನಕ್ಕೆ ಈ ಬಾರಿ ಮನ್ನಣೆ ಒದಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ. ಏಕೆಂದರೆ, ಮೂಲತಃ ಇದು ಕಾದಂಬರಿ ಮತ್ತು ಕಿರುಕಾದಂಬರಿಗಳಿಗೆ ಮೀಸಲಾಗಿರುವ ಪ್ರಶಸ್ತಿ. ಜಯಂತರು ಇದುವರೆಗೆ ಬರೆದಿರುವುದೆಲ್ಲ ಸಣ್ಣಕತೆಗಳೇ.
Advertisement
ಕಾವ್ಯ, ನಾಟಕ, ಅನುವಾದ, ಪ್ರಬಂಧ, ನುಡಿಚಿತ್ರ, ಸಿನಿಮಾ ಸ್ಕ್ರಿಪ್ಟ್, ಸಿನಿಮಾ ಹಾಡು ಎಲ್ಲ ಬರೆದಿರುವ ಜಯಂತರು ಇದುವರೆಗೆ ಪೂರ್ಣಪ್ರಮಾಣದ ಕಾದಂಬರಿಯನ್ನು (ಚಾರ್‌ಮಿನಾರ್ ಒಂದು ಕಿರು ಕಾದಂಬರಿ ಎಂದು ಪರಿಗಣಿಸಿದಲ್ಲಿ) ಬರೆದೇ ಇಲ್ಲ. ಹಾಗಿದ್ದರೂ ಅವರು ಡಿಎಸ್ಸಿಯ ಅಂತಿಮ ಸುತ್ತಿನ ತನಕ ಬಂದಿದ್ದು ಒಂದು ಪವಾಡವೇ. ಒಂದೇ ಎಳೆಯ ಕತೆಗಳ ಸಂಕಲನವನ್ನು ಅಪವಾದ ಎಂಬಂತೆ ಪ್ರಶಸ್ತಿಗೆ ಪರಿಗಣಿಸುವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿದೆ. ಅದು ಈ ಕೃತಿಗೆ ವರದಾನವಾಯಿತು.
ಕನ್ನಡದವರು ಡಿಎಸ್ಸಿಯ ಅಂತಿಮ ಸುತ್ತಿಗೇರಿದ್ದು ಇದೇ ಮೊದಲಲ್ಲ. ಎರಡನೆಯ ವರ್ಷವೇ, ಅಂದರೆ, 2012ರಲ್ಲಿಯೇ ಕನ್ನಡದ ಇಬ್ಬರು ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡಿದ್ದರು. ಯು. ಆರ್. ಅನಂತಮೂರ್ತಿ (ಭಾರತೀಪುರ ಕಾದಂಬರಿ) ಮತ್ತು ಉಷಾ ಕೆ. ಆರ್. (ಮಂಕೀ ಮ್ಯಾನ್ ಕಾದಂಬರಿ). ಹಾಗೆ ನೋಡಿದರೆ, ಕಳೆದ ವರ್ಷ ಅಂತಿಮ ಸುತ್ತಿಗೇರಿದ ಅರವಿಂದ ಅಡಿಗರೂ (ಸಿಲೆಕ್ಷನ್ ಡೇ ಕಾದಂಬರಿ) ಕನ್ನಡದವರೇ. ಆದರೆ, ಮೂಲತಃ ಕನ್ನಡದ ಕೃತಿಯೊಂದು ಹೀಗೆ ಅಂತಿಮ ಸುತ್ತಿಗೇರಿರುವುದು ಇದು ಎರಡನೆಯ ಸಾರಿ. ಕಾದಂಬರಿ ಬರೆಯದೆಯೂ ವಿಶೇಷ ಅವಕಾಶದೊಂದಿಗೆ ಅಂತಿಮ ಸುತ್ತಿಗೇರಿರುವುದು ಇದೇ ಮೊದಲು. ಡಿಎಸ್‌ಸಿ ಸಾಹಿತ್ಯ ಪ್ರಶಸ್ತಿಯ ಇನ್ನೊಂದು ವೈಶಿಷ್ಟ್ಯವೆಂದರೆ, ಅನುವಾದಿತ ಕೃತಿಗೆ ಬಹುಮಾನ ಸಿಕ್ಕಿದಲ್ಲಿ ಬಹುಮಾನದ ಮೊತ್ತವನ್ನು ಮೂಲಕೃತಿಕಾರ ಮತ್ತು ಅನುವಾದಕರಿಗೆ ಸಮನಾಗಿ ಹಂಚಲಾಗುತ್ತದೆ ಎನ್ನುವುದು. ಪ್ರಾದೇಶಿಕ ಭಾರತೀಯ ಕೃತಿಗಳ ಇಂಗ್ಲಿಷ್ ಅನುವಾದಕ್ಕೆ ಉತ್ತೇಜನ ಕೊಡುವ ಉದ್ದೇಶದಿಂದ ಹುಟ್ಟಿಕೊಂಡ “ಜೆಸಿಬಿ ಲಿಟರರಿ ಅವಾರ್ಡ್’ ಕೂಡ ಈ ಆದರ್ಶವನ್ನು ಪಾಲಿಸುತ್ತಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಈ ವರೆಗೆ ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡು ಪ್ರಶಸ್ತಿ ಪಡೆಯದೇ ಹೋದವರಲ್ಲಿ ಅಮಿತ್ ಚೌಧುರಿ (ದ ಇಮ್ಮಾರ್ಟಲ್ಸ…), ಅಮಿತಾವ ಘೋಷ್ (ರಿವರ್ ಆಫ್ ಸ್ಮೋಕ್), ಉದಯ್ ಪ್ರಕಾಶ್ (ದ ವಾಲ್ಸ… ಆಫ್ ದಿಲ್ಲಿ), ಮೊನ್ನೆಯಷ್ಟೇ ಜೆಸಿಬಿ ಸಾಹಿತ್ಯ ಪ್ರಶಸ್ತಿ ಗೆದ್ದ ಬೆನ್ಯಾಮಿನ್ (ಗೋಟ್ ಡೇಸ್) , ಕೆ. ಆರ್. ಮೀರಾ (ಹ್ಯಾಂಗ್ ವುಮನ್ – ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದೆ), ಅಂಜಲಿ ಜೋಸೆಫ್ (ದ ಲಿವಿಂಗ್), ಅರವಿಂದ ಅಡಿಗ (ಸಿಲೆಕ್ಷನ್ ಡೇ), ಜಮೀಲ್ ಅಹ್ಮದ್ (ದ ವಾಂಡರಿಂಗ್ ಫಾಲ್ಕನ್) ಮುಂತಾದ ಘಟಾನುಘಟಿಗಳೆಲ್ಲ ಇದ್ದಾರೆ. ಮತ್ತೂಂದು ತಮಾಷೆ ಎಂದರೆ ಈ ಹಿಂದೆ ಎರಡು ಬಾರಿ ಅಂತಿಮ ಸುತ್ತಿಗೆ ಬಂದೂ ಪ್ರಶಸ್ತಿ ಗಿಟ್ಟಿಸದ ನೀಲ್ ಮುಖರ್ಜಿ (ಅ ಲೈಫ್ ಅಪಾರ್ಟ್ -2011 ಮತ್ತು ದ ಲೈವ್ಸ್ ಆಫ್ ಅದರ್ಸ್ -2016) ಮೂರನೆಯ ಬಾರಿ ತಮ್ಮ ಅ ಸ್ಟೇಟ್ ಆಫ್ ಫ್ರೀಡಮ… ಕಾದಂಬರಿಯೊಂದಿಗೆ ಜಯಂತರಿಗೆ ಸ್ಪರ್ಧೆ ಒಡ್ಡಿದ್ದಾರೆ! ಅಷ್ಟೇ ಅಲ್ಲ, ಬಹು ಪ್ರಶಂಸಿತ ಹೋಮ್ ಫೈರ್ ಕಾದಂಬರಿಯ ಕಮಿಲಾ ಶಂಸೀ ಮತ್ತು ಎಗ್ಸಿಟ್ ವೆಸ್ಟ್ ಕಾದಂಬರಿಯ ಮೊಹ್ಸಿನ್ ಹಮೀದ್ ಇಬ್ಬರಿಗೂ ಇದು ಎರಡನೆಯ ಬಾರಿಗೆ ಸಿಕ್ಕಿದ ಅಂತಿಮ ಸುತ್ತು. 2010ರಲ್ಲಿ ತಮ್ಮ ಸೀರಿಯೆಸ್ ಮೆನ್ ಕಾದಂಬರಿಗೆ ದ ಹಿಂದೂ ಬೆಸ್ಟ್ ಫಿಕ್ಷನ್ ಅವಾರ್ಡ್ ಮತ್ತು 2011ರಲ್ಲಿ ಅಮೆರಿಕನ್ ಪೆನ್ ಓಪನ್ ಬುಕ್ ಅವಾರ್ಡ್ ಪಡೆದ ಮನು ಜೋಸೆಫ್ ಕೂಡಾ ಈ ಬಾರಿ ಅಂತಿಮ ಸುತ್ತಿನಲ್ಲಿದ್ದಾರೆ. ಈ ದೃಷ್ಟಿಯಲ್ಲಿಯೂ ಅಂತಿಮ ಸುತ್ತಿಗೇರಿದ ಜಯಂತರ ಸಾಧನೆ ಬಹು ಮಹತ್ವದ್ದು ಮತ್ತು ವೈಶಿಷ್ಟ್ಯಪೂರ್ಣವಾದದ್ದು.
ಏಳು ಸಂಕಲನಗಳಲ್ಲಿ ಒಟ್ಟು ಎಪ್ಪತ್ತೂಂದು ಪ್ರಕಟಿತ ಕತೆಗಳ ಕತೆಗಾರ ಜಯಂತರ ಕೇವಲ ಹದಿನಾರು ಕತೆಗಳು ಈ ನೋ ಪ್ರಸೆಂಟ್ಸ್ ಪ್ಲೀಸ್ ಸಂಕಲನದಲ್ಲಿವೆ. ಈ ಹದಿನಾರು ಕತೆಗಳು ಜಯಂತರ ಶ್ರೇಷ್ಠ ರಚನೆಗಳೆಂಬ ಕಾರಣಕ್ಕೆ ಇಲ್ಲಿ ಸಂಕಲಿತಗೊಂಡಿರುವುದಲ್ಲ; ಬದಲಿಗೆ ಅವು ಮುಂಬಯಿ ನಗರವನ್ನು ತನ್ನ ಕಥಾಕ್ಷೇತ್ರವನ್ನಾಗಿಸಿಕೊಂಡಿವೆ ಎನ್ನುವ ಕಾರಣಕ್ಕಾಗಿ ಆರಿಸಲ್ಪಟ್ಟಿವೆ. ಹಾಗಾಗಿ, ಈ ಸಂಕಲನಕ್ಕೆ ಒಂದು ನಿರ್ದಿಷ್ಟ ಚೌಕಟ್ಟು ತನ್ನಿಂತಾನೇ ತೊಡಿಸಲ್ಪಟ್ಟಿದೆ. ಜಯಂತರ ಕೃತಿಗಳ ವಿಸ್ತೃತವಾದ ಓದು, ಒಡನಾಟ, ವ್ಯಕ್ತಿಗತವಾಗಿ ನಮ್ಮ ನೆಚ್ಚಿನ ಕತೆಗಾರನ ಕುರಿತು ಹೆಚ್ಚುವರಿಯಾಗಿ ತಿಳಿದುಕೊಂಡಿರುವುದು ಎಲ್ಲ ನಮ್ಮ ಓದಿಗೆ ತೊಡಿಸುವ ಒಂದು ಎಕ್ಸಾ ಫಿಟಿಂಗ್ ಇದ್ದೇ ಇದೆ. ಅದು ಕೆಲವೊಮ್ಮೆ ನಮ್ಮ ಓದಿಗೆ ಧನಾತ್ಮಕವೂ, ಪೂರಕವೂ ಆಗಿ ಒದಗಿಬರಬಹುದು ಎನ್ನುವಷ್ಟೇ, ಅದೇ ದೊಡ್ಡದೊಂದು ಮಿತಿಯಾಗಬಹುದು ಎನ್ನುವುದು ಕೂಡ ಸತ್ಯ. ಅದೇ ರೀತಿ, ಸೀಮಿತವಾದ ಒಂದು ಓದಿನಿಂದ ರೂಪಿಸಿಕೊಳ್ಳುವ ಅಭಿಪ್ರಾಯ, ನಿಲುವು ಕೂಡ ಇಂತಹುದೇ ಇತಿಮಿತಿಗಳಿಗೆ ಒಳಗಾಗಿರುತ್ತದೆ. ಅದು ಕೆಲವೊಂದು ಸ್ವಾತಂತ್ರ್ಯವನ್ನೂ ಕೊಡುತ್ತದೆ, ಮಿತಿಗಳನ್ನೂ ಹೇರುತ್ತದೆ. ಹಾಗೆ ನಾವು ಓದಿದ ಅನುವಾದಗಳಿಂದ ಅನ್ಯಭಾಷಿಕ ಲೇಖಕರ ಬಗ್ಗೆ ಹೇಳಿದ್ದು, ತಿಳಿದಿದ್ದು, ಬರೆದಿದ್ದು ಅಂಥ ಇತಿಮಿತಿಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ಮರೆಯದೇ ಜಯಂತರನ್ನು ಅನ್ಯಭಾಷಿಕರು ಕಾಣುತ್ತಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದೇ. ಹಾಗಿದ್ದೂ ಈ ಸಂಕಲನ ಕನ್ನಡೇತರ ಓದುಗರ ಹೃದಯ ಸೂರೆಗೊಂಡಿರುವುದು, ವಿಮರ್ಶಕರಿಗೆ ಹೊಸ ಒಳನೋಟ, ದರ್ಶನ ಒದಗಿಸಿರುವುದು ಮಹತ್ವದ ಬೆಳವಣಿಗೆ. ಅದೇ ಕಾಲಕ್ಕೆ ಜಯಂತರ ಎಲ್ಲ ಕತೆಗಳೂ ಅನುವಾದಗೊಂಡರೆ ಅದನ್ನು ಈ ಹೊಸ ಓದುಗರು ಹೇಗೆ ಸ್ವೀಕರಿಸುತ್ತಾರೆ, ಹೇಗೆ ಪ್ರತಿಸ್ಪಂದಿಸುತ್ತಾರೆ ಎನ್ನುವುದು ಕುತೂಹಲಕರ ಎನಿಸತೊಡಗಿದೆ. ಆ ಕಾಲವೂ ಬಹುಬೇಗ ಬರುವಂತಾಗಲಿ ಎನ್ನುವುದು ಈ ಸಂದರ್ಭದ ನಿರೀಕ್ಷೆಯಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಎರಡು ಬಾರಿ ಶ್ರೀಲಂಕಾದ ಬರಹಗಾರರು ಮತ್ತು ಒಂದು ಬಾರಿ ಪಾಕಿಸ್ತಾನಿ ಕಾದಂಬರಿಕಾರ ಈ ಪ್ರಶಸ್ತಿಯನ್ನು ಪಡೆದಿ¨ªಾರೆ. ಉಳಿದಂತೆ ನಾಲ್ಕು ಬಾರಿ ಪ್ರಶಸ್ತಿ ಪಡೆದವರು ಭಾರತದ ಕಾದಂಬರಿಕಾರರೇ ಆಗಿರುವುದು ಒಂದು ವಿಶೇಷ. ಜೀತ್ ಥಾಯಿಲ್ (ನಾರ್ಕಾಪಾಲಿಸ್), ಸೈರಸ್ ಮಿಸಿŒ (ಕ್ರಾನಿಕಲ್ ಅಫ್ ಅ ಕಾಪ್ಸ್ì ಬೇರರ್) , ಜುಂಪಾ ಲಹಿರಿ (ದ ಲೋ ಲ್ಯಾಂಡ್), ಅನುರಾಧಾ ರಾಯ್ (ಸ್ಲಿàಪಿಂಗ್ ಆನ್ ಜ್ಯುಪಿಟರ್) ಇದು ವರೆಗೆ ಬಹುಮಾನ ಪಡೆದ ಭಾರತೀಯ ಕಾದಂಬರಿಕಾರರು. ಈ ಬಾರಿ ಅದು ಜಯಂತ್ ಕಾಯ್ಕಿಣಿಯವರ ನೋ ಪ್ರಸೆಂಟ್ಸ… ಪ್ಲೀಸ್‌ಗೆ ಲಭಿಸಲಿ ಎಂಬುದು ಕನ್ನಡಿಗರ ಹಾರೈಕೆ.
– ನರೇಂದ್ರ ಪೈ