ವಿಜಯಪುರ: ಫೋನ್ ಕದ್ದಾಲಿಕೆ ಸುಲಭವಲ್ಲ. ದೇಶದ್ರೋಹಿ, ಸಮಾಜ ಘಾತುಕ ಶಕ್ತಿಗಳ ನಿಗ್ರಹ, ಭಯೋತ್ಪಾದಕ ಕೃತ್ಯಗಳ ಮೇಲೆ ನಿಗಾ ಹಾಗೂ ಆದಾಯ ತೆರಿಗೆ ವಂಚನೆ ಕೃತ್ಯಗಳನ್ನು ಪತ್ತೆ ಹಚ್ಚಲು ಅನುಮತಿ ಪಡೆದು ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಆದರೆ, ಫೋನ್ ಕದ್ದಾಲಿಕೆ ನಡೆದಿರುವ ಕುರಿತು ನನಗೆ ನಿಖರ ಮಾಹಿತಿ ಇಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಇಲಾಖೆ ಕೆಲವು ಅಧಿಕಾರಿಗಳನ್ನು ಈ ಕುರಿತು ಕೇಳಿದಾಗ ಕೆಲವರು ಹೌದು ಎಂದರೆ, ಮತ್ತೆ ಕೆಲವರು ಇಲ್ಲ ಎಂದಿದ್ದಾರೆ. ಸಾರ್ವಜನಿಕ ವಲಯದಲ್ಲಿ ಮಾಧ್ಯಮಗಳ ಮೂಲಕ ನಡೆಯುತ್ತಿರುವ ಈ ಗಂಭೀರ ವಿಷಯ ಕುರಿತು ತನಿಖೆಯಿಂದ ಸಂಪೂರ್ಣ ಸತ್ಯ ಹೊರ ಬರಬೇಕಿದೆ ಎಂದರು.
ಯಾರೂ ನನ್ನೊಂದಿಗೆ ಚರ್ಚಿಸಿಲ್ಲ: ನಾನು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಫೋನ್ ಟ್ಯಾಪ್ ಕುರಿತು ಅಧಿಕಾರಿಗಳು ಸೇರಿ ಯಾರೂ ನನ್ನೊಂದಿಗೆ ಫೋನ್ ಕದ್ದಾಲಿಕೆ ಕುರಿತು ಚರ್ಚಿಸಿಲ್ಲ. ಯಾವುದೇ ಫೋನ್ ಕದ್ದಾಲಿಕೆಗೆ ಯಾವುದೇ ಅಧಿಕಾರಿಗೆ ಸೂಚಿಸಿಲ್ಲ. ನೈತಿಕತೆ ಇರಿಸಿಕೊಂಡಿರುವ ನಾನು ಇತರರ ಖಾಸಗಿತನ ಗೌರವಿಸುವ ವ್ಯಕ್ತಿ ಎಂದರು.
ಸತ್ಯಾಸತ್ಯತೆ ಹೊರಬರಲಿ: ಮುಖಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ನಾನು ಮಾತನಾಡಿಲ್ಲ. ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಆಪ್ತ ಕಾರ್ಯದರ್ಶಿಯಾಗಿದ್ದ ಭೀಮಾಶಂಕರ ಹಾಗೂ ವಿಶೇಷ ಅಧಿಕಾರಿಯಾಗಿದ್ದ ಶಶಿ ಹಿರೇಮಠ ಅವರ ಫೋನ್ ಕದ್ದಾಲಿಕೆ ಕುರಿತು ವರದಿಗಳಾಗಿರುವ ಕಾರಣ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದರು.
ಸಿಬಿಐಗೆ ವಹಿಸುವುದು ಬೇಡ: ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಬೇಡ. ದೇಶದ ಹಲವು ಪ್ರಕರಣಗಳ ತನಿಖೆ ನಡೆಸಿರುವ ಸಿಬಿಐ ಏನು ತನಿಖೆ ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದ ಪೊಲೀಸರು ಗೌರಿ ಲಂಕೇಶ, ಡಾ| ಎಂ.ಎಂ. ಕಲಬುರ್ಗಿ ಹತ್ಯೆಯಂತಹ ಕಠಿಣ ಸವಾಲು ಎನಿಸಿದ್ದ ಪ್ರಕರಣಗಳನ್ನು ಸಮರ್ಥವಾಗಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯದ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.