ಕುಳಗೇರಿ ಕ್ರಾಸ್ : ಇಲ್ಲಿಯ ಗ್ರಾಮ ಪಂಚಾಯತಿಯವರು 65 ಲಕ್ಷ ರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಹೆಸ್ಕಾಂ ದವರು ಗ್ರಾಮದಲ್ಲಿನ ಬೀದಿ ದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರ ಪರಿಣಾಮ ಗ್ರಾ. ಪಂ ಯವರು ಗ್ರಾಮೀಣ ಭಾಗದ ಹಳ್ಳಿಗಳನ್ನೇ ಅಂದಕಾರದಲ್ಲಿ ಮುಳುಗಿಸಿದ್ದಾರೆ.
ಗ್ರಾಪಂ ಬೇಜವಾಬ್ದಾರಿತನ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸದ್ಯ ಗ್ರಾಮಸ್ಥರು ಸೂರ್ಯ ಮುಳುಗುತ್ತಿದ್ದಂತೆ ಪ್ರತಿ ಮನೆಯಲ್ಲೂ ಬ್ಯಾಟರಿ ಬಳಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಗಳಲ್ಲಿ ಓಡಾಡುವ ವಾಹನಗಳ ಬೆಳಕಿನಲ್ಲಿಯೂ ಜನರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಪ: ಹೆಸ್ಕಾಂ ದವರು ಪ್ರತಿ ತಿಂಗಳು ಕೊಡುತ್ತಿರುವ ಬಿಲ್‌ನಲ್ಲಿ ಗೋಲ್‌ಮಾಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೆಸ್ಕಾಂ ದವರು ಪ್ರತಿ ತಿಂಗಳು ಕೊಡುವ ಬಿಲ್ ಮತ್ತು ಗ್ರಾಮ ಪಂಚಾಯತಿಯವರು ಪಾವತಿಸಿದ ಬಿಲ್‌ಗಳ ಲೆಕ್ಕ ಪರಿಶೀಲನೆ ಮಾಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯರು ಒತ್ತಾಯಿಸಿದ್ದಾರೆ.
ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದೆವೆ ಹೆಸ್ಕಾಂ ಜೊತೆ ಮಾತನಾಡಿ ಸರಿ ಪಡಿಸುವಂತೆ ಬರವಸೆ ಕೊಟ್ಟಿದ್ದಾರೆ. ಸದ್ಯದಲ್ಲೇ ಬೀದಿದೀಪ ಸಂಪರ್ಕ ಕೊಡಿಸಿ ಗ್ರಾಮದಲ್ಲಿನ ಬೀದಿದೀಪಗಳನ್ನ ಉರಿಸಿ ಗ್ರಾಮವನ್ನ ಬೆಳಕು ಮಾಡುತ್ತೆವೆ. ಗ್ರಾಪಂ ಪಿಡಿಒ ಚಂದ್ರಶೇಖರ ದೊಡ್ಡಪತ್ತಾರ.
ಗ್ರಾಮದಲ್ಲಿನ ಜನ ಕತ್ತಲಲ್ಲಿ ಭಯದಿಂದ ಓಡಾಡುತ್ತಿದ್ದಾರೆ. ಮಹಿಳೇಯರು ಮಕ್ಕಳು ವೃದ್ಧರು ಕತ್ತಲಾದರೆ ಮನೆಯಿಂದ ಹೊರಗೆ ಬರುವಂತಿಲ್ಲ. ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಬೇಗ ವಿದ್ಯುತ್ ಬಿಲ್ ಪಾವತಿಸಿ ಗ್ರಾಮವನ್ನ ಬೆಳಕುಮಾಡಿ ಎಂದು ಗ್ರಾಮದ ಚನ್ನಬಸಪ್ಪ ಮೆಣಸಗಿ ಗ್ರಾಪಂ ಗೆ ಪತ್ರಿಕೆ ಮೂಲಕ ತಿಳಿಸಿದರು.
ಇದು ಯಾವ ಊರು ಸರ್, ಈ ಗ್ರಾಮದಲ್ಲಿ ಬೆಳಕೆ ಇಲ್ವಲ್ಲ ಏನಾಗಿದೆ ಈ ಗ್ರಾಮಕ್ಕೆ ಎಂದು ನಮ್ಮ ಗ್ರಾಮಕ್ಕೆ ಬಂದವರು ನಮ್ಮನ್ನ ಕೇಳುತ್ತಿದ್ದಾರೆ. ನಮಗೆ ಬಹಳ ಮುಜುಗರವಾಗಿದೆ
ಗ್ರಾಮದ ಮರ್ಯಾದೆ ಹೋಗುತ್ತದೆ ಎಂಬ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ಸುಮಾರು ದಿನಗಳಿಂದ ಟಿಸಿ ಸುಟ್ಟಿದೆ ಎಂದು ಸುಳ್ಳು ಹೇಳಿ ನಮ್ಮ ಮರ್ಯಾದೆ ಉಳಿಸಿಕೊಳ್ಳುತ್ತಿದ್ದೆವೆ.
ಹೆಸರು ಹೆಳಲಿಚ್ಚಿಸದ ಗ್ರಾಮದ ಹೊಟೇಲ್ ಮಾಲಿಕ.