ಚನ್ನಗಿರಿ: ಲಕ್ಷಾಂತರ ಜನರ ದಾಹವನ್ನು ತೀರಿಸುತ್ತಿರುವ ಸೂಳೆಕೆರೆ ರಕ್ಷಣೆಗೆ ರಾಜಕಾರಣಿಗಳು ಹಿಂದೇಟು ಹಾಕುತ್ತಿರುವುದರ ಹಿಂದೆ ವೋಟ್‌ಬ್ಯಾಂಕ್ ರಾಜಕೀಯದ ಅನುಮಾನ ಕಾಡುತ್ತಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸೂಳೆಕೆರೆಯಲ್ಲಿ ಖಡ್ಗ ಸಂಘಟನೆ ಹಮ್ಮಿಕೊಂಡಿದ್ದ ಸೂಳೆಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸಂಪತ್ತು ಆಗಿರುವ ಸೂಳೆಕೆರೆ ರಕ್ಷಣೆಗೆ ರಾಜಕಾರಣಿಗಳು ಮುಂದಾಗದೇ ಯಾವುದೋ ಪಟ್ಟಭದ್ರ ಶಕ್ತಿಗೆ ಹೆದರಿ ಬಚ್ಚಿಟ್ಟುಕೊಳ್ಳುವುದು ಸರಿಯಲ್ಲ, ವೋಟು-ನೋಟು ಯಾವತ್ತೂ ಶಾಶ್ವತವಲ್ಲ.
ದಾವಣಗೆರೆ-ಚಿತ್ರದುರ್ಗ 2 ಜಿಲ್ಲೆಗಳ ಲಕ್ಷಾಂತರ ಜನರ ನೀರಿನ ದಾಹವನ್ನು ಕೆರೆಯು ತೀರಿಸುತ್ತಿದೆ. ರೈತರ ಸಾವಿರಾರು ಎಕರೆ ಕೃಷಿಭೂಮಿಗೆ ನೀರನ್ನು ಉಣಿಸುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸೂಳೆಕೆರೆ ಕಾರಣ. ನಮ್ಮೆಲ್ಲರ ಜೀವ ಜಲವಾಗಿರುವ ಕೆರೆ ರಕ್ಷಣೆಗೆ ಮುಂದಾಗದೇ ಕೆರೆಯನ್ನು ಒತ್ತುವರಿ ಮಾಡಿರುವವರನ್ನು ವೋಟ್‌ಗಾಗಿ ರಕ್ಷಣೆ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಇದಕ್ಕೆ ತಕ್ಕ ಪಾಠವನ್ನು ಜನತೆ ಮುಂದೊಂದು ದಿನ ಕಲಿಸಲಿದ್ದಾರೆ ಎಂದರು.
ರಾಜಕಾರಣಿಗಳು, ಅಧಿ ಕಾರಿಗಳು ತಕ್ಷಣ ಕೆರೆಯ ಸರ್ವೇ ಮಾಡಿಸಿ ಅದಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಕೆರೆ ಒತ್ತುವರಿ ವಿಚಾರದಲ್ಲಿ ರಾಜಕೀಯ ಮಾಡಿದರೆ ಜನ ದಂಗೆ ಏಳಲಿದ್ದಾರೆ. ಕೆರೆ ವಿಚಾರದಲ್ಲಿ ಪ್ರತಿಯೊಂದು ಘಟನೆಯನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಮಳೆಯಿಂದ ಕೆರೆಯು ಮೈದುಂಬಿಕೊಂಡು ಕೆರೆಯ ಹಿನ್ನೀರು ತನ್ನ ಜಾಗವನ್ನು ಪ್ರವೇಶಿಸಿದೆ. ಕೆರೆಯ ಜಾಗವನ್ನು ಭದ್ರಗೊಳಿಸಬೇಕು ಎಂದರು. ಹಿರೇಮಠದ ಶಿವಶಾಂತವೀರ ಸ್ವಾಮೀಜಿ, ಖಡ್ಗ ಸ್ವಯಂ ಸೇವಾ ಸಂಘದ ಅಧ್ಯಕ್ಷ ರಘು, ರೈತ ಮುಖಂಡರು ಮತ್ತಿತರರು ಪಾಲ್ಗೊಂಡಿದ್ದರು.