ಗುಂಡ್ಲುಪೇಟೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಅದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಶಾಸಕ ನಿರಂಜನಕುಮಾರ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 234 ಪ್ರಕರಣಗಳಲ್ಲಿ ತಾಲೂಕಿನವರೆ 117 ಸೋಂಕಿತರಿದ್ದಾರೆ. ಇದರಲ್ಲಿ 80ಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪಟ್ಟಣದಲ್ಲಿ ನೆರೆ ರಾಜ್ಯಗಳಿಂದಲೂ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಬೆಂಗಳೂರಿನಿಂದ ಬಂದವ ರಿಂದಲೇ ಕೊರೊನಾ ಹರಡಿರುವುದು ಕಂಡು ಬಂದಿದೆ. ಈ ಬಗ್ಗೆ ಜನತೆ ಭಯಪಡುವುದು ಬೇಡ. ತಾಲೂಕು ಆಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಿಗಾ ವಹಿಸಲಾಗಿದೆ: ಆಯಾ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಆಶಾ, ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿ ನೌಕರರು ಜನರ ಆರೋಗ್ಯದ ಮೇಲೆ ನಿಗಾ ವಹಿಸಿ, ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಈ ಬಗ್ಗೆ ತಾವು ಎಲ್ಲಾ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು ಯಾವುದೇ ಲೋಪಗಳಾಗುತ್ತಿಲ್ಲ ಎಂದು ಶಾಸಕರು ತಿಳಿಸಿದರು.
ಸಲಹೆ ನೀಡಲು ಮನವಿ: ಇತ್ತೀಚಿಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೊರೊನಾ ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನೂ ಒಳಗೊಂಡಂತೆ ಜನಪ್ರತಿನಿಧಿಗಳ ಸಭೆ ಕರೆದಿದ್ದರು. ಆದರೆ, ಸಭೆಗೆ ಆಗಮಿಸಿದ ಹನೂರು ಶಾಸಕ ನರೇಂದ್ರ ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ವರದಿಯನ್ನು ವಿಳಂಬವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಸಿಬ್ಬಂದಿಗೆ ಕೋವಿಡ್ ಸೋಂಕು ಕಂಡುಬಂದ ಕಾರಣ ಲ್ಯಾಬ್ ಸೀಲ್ ಡೌನ್ ಮಾಡಿದ್ದರಿಂದ ಮೈಸೂರಿಗೆ ಕಳುಹಿಸಲಾಗಿತ್ತು. ಅಲ್ಲದೇ ಪ್ರತಿ ದಿನ ಸಂಜೆ ಆಯಾ ಜಿಲ್ಲೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿದೆ. ಆದ್ದರಿಂದ ವಿರೋಧ ಪಕ್ಷದವರು ಎಂಬ ಕಾರಣಕ್ಕೆ ಕೋವಿಡ್ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ತಮ್ಮ ಸೂಕ್ತವನ್ನು ಸಲಹೆಗಳನ್ನು ಕಾಲಕಾಲಕ್ಕೆ ನೀಡುವುದರೊಂದಿಗೆ ಹಿರಿಯರಾದ ನರೇಂದ್ರ ಸಹಕಾರ ನೀಡಲಿ ಎಂದು ಮನವಿ ಮಾಡಿದರು.