ಬಸವನಬಾಗೇವಾಡಿ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಅವಾಗ ಜನರು ತೀರ್ಮಾನಿಸುತ್ತಾರೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ಮನಗೂಳಿ ಪಟ್ಟಣದಲ್ಲಿ ಪಪಂ ವತಿಯಿಂದ 2017-18ನೇ ಸಾಲಿನ ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ ಎಂದರು.
ನನಗೂ ರಾಜಕೀಯ ಮಾಡೋಕ್ಕೆ ಬರುತ್ತೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. ವರ್ಷವಿಡಿ ರಾಜಕೀಯ ಮಾಡಿದರೆ ಜನರ ಸಮಸ್ಯೆ ಆಲಿಸಲು ಸಾಧ್ಯವಾಗಲ್ಲ. ಜನರ ಹಿತ ಕಾಯುವ ಕೆಲಸವಾಗಬೇಕು ಹೊರತು ಪದೆ ಪದೆ ರಾಜಕೀಯ ಮಾಡುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗದೆ ಹರಿಯುವ ನೀರಾದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಹೇಳಿದರು.
ಯಾವುದೇ ಒಂದು ಸ್ಥಳೀಯ ಸಂಸ್ಥೆಗಳು ತನ್ನ ಕಾಲ ಮೇಲೆ ನಿಂತಾಗ ಮಾತ್ರ ಪಟ್ಟಣದ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಮನಗೂಳಿ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೆ ಏರಿಸಿದಾಗ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಸಾಧ್ಯವಾಯಿತು ಎಂದರು.
Related Articles
ಬಸವನಬಾಗೇವಾಡಿ ಪಟ್ಟಣದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಇದರಿಂದ ವರ್ಷಕ್ಕೆ ಪುರಸಭೆಗೆ ಲಕ್ಷಾಂತರ ಆದಾಯ ಬರುತ್ತದೆ. 10 ಕೋಟಿ ವೆಚ್ಚದಲ್ಲಿ ಬಸವ ಭವನ ನಿರ್ಮಾಣವಾಗಿದ್ದು ಇದರ ಆದಾಯ ಕೂಡಾ ಪುರಸಭೆಗೆ ಬರುತ್ತಿದೆ. 12 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಪಟ್ಟಣದಲ್ಲಿ ತಲೆ ಎತ್ತುತ್ತಿದೆ ಎಂದು ಹೇಳಿದರು.
ಮನಗೂಳಿ ಪಟ್ಟಣದಲ್ಲಿ ಕೂಡಾ ಬಡ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಕಲ್ಯಾಣ ಮಂಟಪ, 400ಕ್ಕೂ ಹೆಚ್ಚು ಆಸರೆ ಮನೆಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಬರುವ ದಿನನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಶಾಸಕ ಶಿವಾನಂದ ಪಾಟೀಲರು ಮನಗೂಳಿಗೆ ಸಾವಿರಾರು ಕೋಟಿ ಹಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಪಟ್ಟಣದ ಜನರ ಅನುಕೂಲಕ್ಕಾಗಿ 35 ಕೋಟಿ ವೆಚ್ಚದಲ್ಲಿ ಸರ್ಕಾರಿ ಡಿಗ್ರಿ ಕಾಲೇಜ್, 8 ಕೋಟಿಯಲ್ಲಿ ಹೆಣ್ಣು ಮಕ್ಕಳಿಗೆ ವಸತಿ ನಿಲಯ ಸೇರಿದಂತೆ ಪಟ್ಟಣದ ಪ್ರತಿ ವಾರ್ಡ್‌ಗಳಿಗೆ ವಿಶೇಷ ಅನುದಾನ ತಂದು ಸಿಸಿ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು.
ಈಗ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಬಂದಿದ್ದು ಇದರಲ್ಲಿ ಮನಗೂಳಿ ಪಟ್ಟಣದ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆವರೆಗೆ 2.50 ಕೋಟಿ ಹಣದಲ್ಲಿ ಬೀದಿ ದೀಪ ಅಳವಡಿಸುವ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.